Menu

ಆಶ್ರಮ ಶಾಲೆ ಬಾಲಕಿಯರಿಗೆ ಹಾವು ಕಡಿತ: ಮೂವರ ಸಾವು, ಒಬ್ಬಾಕೆ ಸ್ಥಿತಿ ಗಂಭೀರ

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋಕಾ ತಾಲೂಕಿನಲ್ಲಿರುವ ಸರ್ಕಾರಿ ಆಶ್ರಮ ಶಾಲೆಯಲ್ಲಿ ಆರು ಬಾಲಕಿಯರಿಗೆ ಹಾವು ಕಡಿದಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ. ಮೂವರು ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಶ್ರಮದಲ್ಲಿದ್ದ 14 ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಧನೋಕಾ ತಾಲೂಕಿನ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ 79 ವಿದ್ಯಾರ್ಥಿನಿಯರು ನೆಲದಲ್ಲಿ ಮಲಗಿದ್ದರು. ಬೆಳಗಿನ ಜಾವ  ಎರಡು ಗಂಟೆಗೆ ಹಾವು ಕಡಿದಿದೆ. ಪೊಲೀಸ್ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದು ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಮೂವರು ಬಾಲಕಿಯರು ಹಾವು ಕಡಿತದಿಂದ ಮೃತಪಟ್ಟಿದ್ದು, ಸಂಪೂರ್ಣ ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.

ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ತಂಡಗಳು ಕ್ರಮ ಕೈಗೊಂಡಿದ್ದು, ಹಾಸ್ಟೆಲ್‌ಗೆ ಹಾವು ಹೇಗೆ ಪ್ರವೇಶಿಸಿತು ಮತ್ತು ವಿದ್ಯಾರ್ಥಿಗಳಿಗೆ ಹಾವು ಕಚ್ಚಲು ಕಾರಣ ಏನು ಎಂಬ ಬಗ್ಗೆ ತನಿಖೆ ಕೈಗೊಂಡಿವೆ. ವಿಶ್ವ ಬುಡಕಟ್ಟು ದಿನದ ಮರುದಿನವೇ ಈ ಘಟನೆ ನಡೆದಿರುವುದು ಹಾಸ್ಟೆಲ್‌ನ ಸ್ವಚ್ಛತೆ, ಮಲಗುವ ವ್ಯವಸ್ಥೆ, ಹಾವು ತಡೆಗಟ್ಟುವ ಕ್ರಮಗಳು ಮತ್ತು ರಾತ್ರಿಯ ಸುರಕ್ಷತಾ ನಿಯಮಗಳ ಬಗ್ಗೆ ಆತಂಕ ಸೃಷ್ಟಿಸಿದೆ.

ಸುರಕ್ಷತಾ ನಿಯಮ ಪಾಲಿಸಲಾಗಿದೆಯೇ ಹಾಗೂ ಶಾಲಾ ಆಡಳಿತ ಮಂಡಳಿ ಕಡೆಯಿಂದ ಲೋಪಗಳಾಗಿವೆಯೇ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Related Posts

Leave a Reply

Your email address will not be published. Required fields are marked *