Menu

ಶಾಂತಲಾ ಡ್ರಾಪ್‌ ಸರ್ಚ್‌ ಮಾಡಿದ್ದ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ

ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ನಾಪತ್ತೆಯಾಗಿರುವ ಬೆಂಗಳೂರಿನ ಕಾಡುಗೋಡಿಯ ಟೆಕ್ಕಿ, ಮಧ್ಯಪ್ರದೇಶದ ಇಂದೋರ್‌ನ ಅದ್ವೈತ್ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ನಾಪತ್ತೆಯಾದ ಮೂರನೇ ದಿನವೂ ಅದ್ವೈತ್‌ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆಯ ವೇಳೆ ಇದು ಪೂರ್ವನಿಯೋಜಿತ ಆತ್ಮಹತ್ಯೆ ಎಂಬ ಶಂಕೆ ಉಂಟಾಗಿದೆ.

ಅದ್ವೈತ್ ಮನೆ ಪರಿಶೀಲಿಸಿದ ಪೊಲೀಸ್‌ಗೆ ಲ್ಯಾಪ್‌ಟಾಪ್ ಪತ್ತೆಯಾಗಿದೆ. ಲ್ಯಾಪ್‌ಟಾಪ್ ತಪಾಸಣೆ ವೇಳೆ ಅದ್ವೈತ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಹುಡುಕಾಟ ನಡೆಸಿರುವುದು ಬಯಲಾಗಿದೆ.

ಬೆಳಿಗ್ಗೆ 7:30 ಕ್ಕೆ ಬಿದ್ದರೆ ಸಾವು ಸಂಭವಿಸಬಹುದು ಎಂದು ಎಐ ಉತ್ತರಿಸಿತ್ತು. ಆ.4 ರಂದೇ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಬಳಿ ಅದ್ವೈತ್ ಬಂದಿರುವುದು ಪೊಲೀಸರಿಗೆ ದೃಢಪಟ್ಟಿದೆ.

ಪೂರ್ವನಿಯೋಜಿತ ಪ್ಲಾನ್ ಪ್ರಕಾರವೇ ಆ.7 ಶುಕ್ರವಾರ ಬೆಳಿಗ್ಗೆ ಶಿವಗಂಗೆಗೆ ಟ್ರಕ್ಕಿಂಗ್ ತೆರಳಿದ್ದ ಅದ್ವೈತ್, ಬೆಟ್ಟ ಹತ್ತುತ್ತಿದ್ದಂತೆ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಾಪ್ತಿ ಚೌಹಾಣ್‌ಗೆ ಕೊನೆಯದಾಗಿ ಫೋಟೋ ಒಂದನ್ನು ಕಳುಹಿಸಿದ್ದರು. ಅದಾದ ನಂತರ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಬೆಟ್ಟದ ತುತ್ತ ತುದಿಯಲ್ಲಿ ಇತರ ಚಾರಣಿಗರು ತೆಗೆದ ಫೋಟೋದಲ್ಲಿ ಅದ್ವೈತ್ ಇರುವುದು ಪತ್ತೆಯಾಗಿದೆ.

ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ, ಎಸ್‌ಡಿಆರ್‌ಎಫ್ ತಂಡ ಹಾಗೂ ಚಾರಣಿಗರು ಮೂರನೇ ದಿನವೂ ಶೋಧ ಕಾರ್ಯ ಕೈಗೊಂಡಿದ್ದಾರೆ. ಅತ್ಯಾಧುನಿಕ ಡ್ರೋನ್ ಕ್ಯಾಮೆರಾ ಬಳಸಿ ಬೆಟ್ಟದ ಪ್ರಪಾತ ಹಾಗೂ ಕಡಿದಾದ ಜಾಗಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಬೆಟ್ಟದ ತುದಿಯ ಶಾಂತಲಾ ಡ್ರಾಪ್ ಆಳ ಕಂದಕವಾಗಿರುವುದರಿಂದ ಹುಡುಕಾಟ ಸವಾಲಾಗಿ ಪರಿಣಮಿಸಿದೆ.

ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿದೆ, ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ನಾಟ್ಯರಾಣಿ ಶಾಂತಲೆ ಇಲ್ಲಿಂದ ಹಾರಿ ಪ್ರಾಣತ್ಯಾಗ ಮಾಡಿರುವುದಾಗಿ ನಂಬಿಕೆ ಇದ್ದು, ಈ ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತದೆ. ಇದು ಬೆಟ್ಟದ ತುಟ್ಟತುದಿಯಲ್ಲಿರುವ ಅತ್ಯಂತ ಅಪಾಯಕಾರಿ ಪ್ರದೇಶ.

Related Posts

Leave a Reply

Your email address will not be published. Required fields are marked *