ಬೆಂಗಳೂರು ನಗರದ ಹಾಸ್ಟೆಲ್‌ವೊಂದರಲ್ಲಿ ಬಿಟೆಕ್ ವಿದ್ಯಾರ್ಥಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರದ ರಕ್ಷನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಆ.6 ರಂದು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಾನು ಒಳ್ಳೆ ಮಗನಾಗಲಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾನೆ. ರಕ್ಷನ್ ಮೃತದೇಹವನ್ನು ಪೊಲೀಸರು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಸದಾಶಿವನಗರ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯ ಅಸ್ಥಿಪಂಜರ ಪತ್ತೆ
ಟಿ.ದಾಸರಹಳ್ಳಿಯ ಬಾಗಲಗುಂಟೆ ಹಾವನೂರು ಬಡಾವಣೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. 50 ವರ್ಷ ವಯಸ್ಸಿನ ದಾಕ್ಷಾಯಿಣಿ ಎಂಬವರ ಅಸ್ಥಿಪಂಜರ ಎಂದು ಗುರುತಿಸಲಾಗಿದೆ. ಅವರು ಮೃತಪಟ್ಟು ಒಂದೂವರೆ ವರ್ಷವಾಗಿದೆ.
10 ವರ್ಷದ ಹಿಂದೆ ಆಕೆಯ ಗಂಡ ಉಮೇಶ್ ಮೃತಪಟ್ಟಿದ್ದರು. ಮಗನೂ ಅನಾರೋಗ್ಯದಿಂದ ಅಸು ನೀಗಿದ್ದ. ಬಳಿಕ ದಾಕ್ಷಾಯಿಣಿ ಅವರು ಒಬ್ಬರೇ ವಾಸವಾಗಿದ್ದರು. ಒಂದು ವರ್ಷದಿಂದ ಮನೆ ಇದ್ದ ಹಾಗೆಯೇ ಇತ್ತು.
ರಾತ್ರಿ ಎಂಟು ಗಂಟೆಗೆ ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು, ಯಾರೋ ಕಳ್ಳತನ ಮಾಡಲು ಬಂದಿರಬಹುದು ಎಂದು ಪೊಲೀಸ್‌ಗೆ ಕರೆ ಮಾಡಿದ್ದರು. ಪೊಲೀಸರು ಬಂದು ನೋಡಿದಾಗ ಮನೆಯ ಬಾತ್ ರೂಂನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ.


