ನೆಲ, ಜಲ ಮತ್ತು ಗಡಿ ವಿಷಯದಲ್ಲಿ ರಾಜ್ಯ- ರಾಜ್ಯಗಳ ನಡುವೆ ಸೌಹಾರ್ದತೆ ಇರಬೇಕು. ಆದರೆ ಇದು ರಾಜಕೀಯ ಸಹಮತ ಮತ್ತು ಸಮನ್ವಯತೆಯಿಂದ ಮಾತ್ರ ಸಾಧ್ಯ.
ಕಾವೇರಿ ಕಣಿವೆಯ ಪ್ರಮುಖ ಮೇಕೆದಾಟು ಯೋಜನೆ ಮತ್ತೆ ಸದ್ದು ಮಾಡಿದೆ. ಈ ಯೋಜನೆ ಶತಾಯ ಗತಾಯ ಆಗಿಯೇ ತೀರುತ್ತೆ ಎಂದು ಜಲಸಂಪನ್ಮೂಲ ಮಂತ್ರಿ ರಾಮಲಿಂಗಾರೆಡ್ಡಿ ಬುಧವಾರದಂದು ಒತ್ತಿ ಹೇಳಿದ್ದಾರೆ. ಆದರೆ ಇದು ಕಾರ್ಯಗತವಾಗದಂತೆ ತಮಿಳುನಾಡು ಬಿಗಿಪಟ್ದು ಹಿಡಿದಿದೆ. ಇಂತಹ ಮೊಂಡುಪಟ್ಟು ಅಥವಾ ಬಿಗಿವಾದ ಅನಗತ್ಯ ಮೇಕೆದಾಟು ಯೋಜನೆ ಪೂರ್ಣಗೊಂಡರೆ ಇದರ ಹೆಚ್ಚಿನ ಲಾಭ ತಮಿಳುನಾಡಿಗೇ ! ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ . ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್.
ತಮಿಳುನಾಡು ಜನತೆ ಈಗಲಾದರೂ ಯೋಜನೆಯ ನೈಜತೆ ಮತ್ತು ಸತ್ಯಾಸತ್ಯತೆಯನ್ನು ಅರಿಯುವುದು ಸೂಕ್ತ. ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿ ಆಯೋಜಿತವಾದ ಮೇಕೆದಾಟುವಿಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಮೊನ್ನೆಯಷ್ಟೆ ಸ್ಪಷ್ಟಪಡಿಸಿದೆ. ವಸ್ತುಸ್ಥಿತಿ ಹೀಗಿರಬೇಕಾದರೆ, ಇದನ್ನು ಪದೇ ಪದೇ ಕೆದಕಿ ಸುಪ್ರೀಂಕೋರ್ಟ್ ಅಂಗಳದಲ್ಲಿ ವ್ಯಾಜ್ಯ ತೆಗೆಯುವುದು ಅರ್ಥಹೀನ. ಇದು ಕಳೆದ ಎರಡೂವರೆ ದಶಕಗಳಿಂದಲೂ ಇದೇ ವೈಖರಿ ಮುಂದುವರಿದಿದೆ. ಒಟ್ಟಿನಲ್ಲಿ ತಮಿಳುನಾಡು ಮನೋಧೋರಣೆ ಬದಲಾಗದೆ, ಉಭಯ ರಾಜ್ಯಗಳಿಗೆ ಅನುಕೂಲ ಎಸಗುವ ಮೇಕೆದಾಟು ಸಫಲಗಾಣದು.
ಮೂರು ದಿನಗಳ ಹಿಂದೆ ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ದಾಖಲಿಸಿರುವ ತಗಾದೆಯಲ್ಲಿ ಈ ಯೋಜನೆಯ ಪ್ರಸ್ತಾವನೆಯೂ ಇದೆ. ಉದ್ದೇಶಿತ ಯೋಜನೆಗೆ ತಡೆಯಾಜ್ಞೆ ಪಡೆಯುವಲ್ಲಿ ತಮಿಳುನಾಡು ಪರ ವಕೀಲರೀಗ ದಿಲ್ಲಿಯಲ್ಲಿ ಸರ್ವ ಸಜ್ಜಾಗಿರುವುದು ದಿಟ. ಆದರೆ ಕರ್ನಾಟಕವು ಕೂಡಾ ಇದೇ ವೇಳೆ ತನ್ನಸಮರ್ಥವಾದ ವಾದವನ್ನು ಮಂಡಿಸಲು ಪೂರ್ಣ ಸಿದ್ದತೆ ನಡೆಸುವುದು ಸೂಕ್ತ. ಹಾಗೆಯೇ ಈ ಯೋಜನೆಗೆ ತಮಿಳುನಾಡು ಅನುಮತಿ ಬೇಕಿಲ್ಲ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸುಪ್ರೀಂಕೋರ್ಟ್ ಮುಂದೆ ಕೂಡಾ ಇದೇ ಮಾತನ್ನು ಪುನರುಚ್ಚರಿಸಬೇಕು. ಆಗಲೇ ಕರ್ನಾಟಕದ ವಾದಕ್ಕೆ ಸುಪ್ರೀಂಕೋರ್ಟ್ ಮುಂದೆ ಪುಷ್ಟಿ ದೊರೆಯುವುದು. ಒಂದು ಕಡೆ ಕಾನೂನು ಹೋರಾಟಕ್ಕೆ ಬಲ ತುಂಬುವ ಕೆಲಸ ಮುಂದುವರಿದು ಮತ್ತೊಂದು ಕಡೆ ರಾಜಕೀಯವಾಗಿ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರ್ವಸೂಕ್ತ.
ಕಾವೇರಿಯ ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದ ನಿವೃತ್ತ ಅಧಿಕಾರಿಗಳು ಮಾಧ್ಯಮ ತಜ್ಞರು, ನಿವೃತ್ತ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಇವರ ಜೊತೆ ಸರ್ಕಾರವಿಂದು ಅರ್ಥಗರ್ಭಿತ ಮಾತುಕತೆ ನಡೆಸುವುದು ಲೇಸು. ೨೦೦೩ರಲ್ಲಿ ಇದೇ ಬಗೆಯ ಕಾವೇರಿ ಸುಳಿಯಲ್ಲಿ ರಾಜ್ಯ ಸಿಲುಕಿದಾಗ ಅಂದಿನ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣ ಸರ್ಕಾರ , ನಾಡಿನ ಅನುಭವಿಗಳು ಮತ್ತು ಪರಿಣಿತರ ಜೊತೆ ಸಮಾಲೋಚನೆ ನಡೆಸಿ ಪರಿಹಾರಕ್ಕೆ ಯತ್ನಿಸಿದ್ದರು. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಈಗ ಬೇಕಿರುವುದು ಸಕಾಲಿಕ ಮತ್ತು ಸರ್ವಸೂಕ್ತ ಮಾರ್ಗೋಪಾಯ. ನೆಲ ಮತ್ತು ಜಲ ವಿವಾದಗಳ ವಿಷಯದಲ್ಲಿ ರಾಜ್ಯಗಳ ನಡುವೆ ಸೌಹಾರ್ದತೆ ಇರಬೇಕು. ಆದರೆ ಇದು ರಾಜಕೀಯ ಸಹಮತ ಮತ್ತು ಸಮನ್ವಯತೆಯಿಂದ ಮಾತ್ರ ಸಾಧ್ಯ.


