ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಯೋಜಿಸಿರುವ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ಪ್ರಸ್ತಾವಿತ ತಿದ್ದುಪಡಿ ವಿರುದ್ಧ ಕೇರಳದ ತಿರುವನಂತಪುರದ ಸಂಸದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಕಿಡಿ ಕಾರಿದ್ದಾರೆ. ಇದು ಕಾರ್ಯಾಂಗದ ಅಧಿಕಾರ ಕೇಂದ್ರಿಕರಣ ಪ್ರಕ್ರಿಯೆ ಅಪಾಯಕಾರಿ ಮಟ್ಟಕ್ಕೆ ಹೆಚ್ಚಳ ಎಂದು ವ್ಯಾಖ್ಯಾನಿಸಿದ್ದಾರೆ.
ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ಪ್ರಸ್ತಾವಿತ ತಿದ್ದುಪಡಿ ಮಸೂದೆ ಭಾರತೀಯ ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಂಬಂಧವನ್ನು ಮೂಲಭೂತವಾಗಿ ಬದಲಾಯಿಸುತ್ತದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಬಹುಸಂಖ್ಯಾತ ಸಿದ್ಧಾಂತ ಮತ್ತು ಸ್ವತಂತ್ರ ಧ್ವನಿಗಳ ಬಗೆಗಿನ ಅಸಹನೆಯಿಂದ ಕೂಡಿರುವುದಾಗಿ ಟೀಕಿಸಿದ್ದಾರೆ. ಸರ್ಕಾರವು ಲಾಭರಹಿತ ದತ್ತಿ ಸಂಸ್ಥೆಗಳು, ಚಿಂತಕರ ಚಾವಡಿಗಳು ಮತ್ತು ಮಾನವ ಹಕ್ಕುಗಳ ಗುಂಪುಗಳನ್ನು ಅಭಿವೃದ್ಧಿ ಪಾಲುದಾರರೆಂದು ಪರಿಗಣಿಸುವ ಬದಲಾಗಿ ವಿಧ್ವಂಸಕ ಕೃತ್ಯಗಳು ಮತ್ತು ವಿದೇಶಿ ಹಸ್ತಕ್ಷೇಪದ ಮೂಲಗಳಾಗಿ ಬಿಂಬಿಸುತ್ತಿದೆ. ಇದಕ್ಕಾಗಿ ಸರ್ಕಾರವು ಅಂತಾರಾಷ್ಟ್ರೀಯ ದತ್ತಿ ನೆರವಿನ ಮೇಲಿನ ಅವುಗಳ ಅವಲಂಬನೆಯನ್ನೇ ಗುರಿಯಾಗಿಸಿಕೊಂಡಿದೆ ಎಂದು ಶಶಿ ತರೂರ್ ಕಿಡಿ ಕಾರಿದ್ದಾರೆ.
ಈ ಮಸೂದೆಯು ಯಾವುದೇ ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದಾದಾಗ, ಸ್ವಯಂಪ್ರೇರಿತವಾಗಿ ಹಿಂಪಡೆದಾಗ ಅಥವಾ ನವೀಕರಿಸದ ಕಾರಣದಿಂದಾಗಿ ಮುಕ್ತಾಯಗೊಂಡಾಗ ಸಂಸ್ಥೆಯ ವಿದೇಶಿ ಕೊಡುಗೆಗಳು ಮತ್ತು ಆಸ್ತಿಗಳ ನಿರ್ವಹಣೆಯನ್ನು ವಹಿಸಿಕೊಳ್ಳಲು ನಿರ್ದಿಷ್ಟ ಪ್ರಾಧಿಕಾರ ರಚಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲು ಉದ್ದೇಶಿಸಿದೆ. ಆಸ್ತಿಯು ಆರಾಧನಾ ಸ್ಥಳವಾಗಿದ್ದಲ್ಲಿ ಧಾರ್ಮಿಕ ಸ್ವರೂಪವನ್ನು ಕಾಯ್ದುಕೊಳ್ಳುವುದನ್ನು ಆ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು ಎಂದೂ ತಿಳಿಸಲಾಗಿದೆ. ಈ ಕ್ರಮ ವಿದೇಶಿ ನಿಧಿಯಲ್ಲಿ ಶೇ.87 ಕುಸಿತಕ್ಕೆ ಕಾರಣವಾಗಿವೆ ಹಾಗೂ ಸಾವಿರಾರು ಜಾತ್ಯತೀತ ಮತ್ತು ಸಮುದಾಯ-ಆಧಾರಿತ ಸಂಘಟನೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಮಾಡಿವೆ ಎಂದು ಟೀಕಿಸಿದ್ದಾರೆ.
ಸರ್ಕಾರವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಲ್ಲಿ ತರುವ ಕಾನೂನು ಬದಲಾವಣೆಗಳು ಈ ಕ್ಷೇತ್ರವನ್ನು ಶಾಶ್ವತವಾಗಿ ದುರ್ಬಲಗೊಳಿಸುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.


