Menu

ಡಿಜಿಟಲ್ ಅರೆಸ್ಟ್ ಬೆದರಿಕೆ: ವ್ಯಕ್ತಿಯ ಜೀವಮಾನದ ಗಳಿಕೆ ದೋಚಿದ ವಂಚಕರು

Cyber fraud

ನಿಮ್ಮ ವಿರುದ್ಧ ದಾಖಲಾಗಿರುವ ಮನಿ ಲಾಂಡ್ರಿಂಗ್ ಪ್ರಕರಣದಡಿ ನೀವು ಡಿಜಿಟಲ್‌ ಅರೆಸ್ಟ್‌ ಆಗಿದ್ದೀರಿ, ಈ ವಿಷಯ ನೀವು ಯಾರಿಗೂ ಹೇಳಬಾರದು ಎಂದು ಬೆದರಿಸಿ ಮೈಸೂರಿನ ಹಿರಿಯ ನಾಗರಿಕರೊಬ್ಬರ ಇಡೀ ಜೀವಮನಾದ ಗಳಿಕೆಯನ್ನೇ ವಂಚಕರು ದೋಚಿರುವ ವಿಚಾರ ಬಯಲಾಗಿದೆ.

ಮೈಸೂರು ಜೆ.ಪಿ.ನಗರ 2ನೇ ಹಂತದ 68 ವರ್ಷದ ನಿವೃತ್ತ ಹಿರಿಯ ನಾಗರಿಕರೊಬ್ಬರಿಗೆ ಜುಲೈ ಮೂರರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಟ್ರಾಯ್‌ ಅಧಿಕಾರಿ ಎಂದು ಹೇಳಿ, ಮುಂಬೈನ ತಿಲಕ್ ನಗರದಲ್ಲಿ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ನೋಂದಣಿಯಾಗಿದೆ. ನೀವು ತೆಗೆದುಕೊಂಡಿಲ್ಲ ಎಂದರೆ ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ವ್ಯಕ್ತಿ ಯಾವುದೇ ಸಿಮ್ ಪಡೆದಿಲ್ಲ ಎಂದು ಹೇಳಿದರೂ ವಂಚಕರು ಒಂದು ದೂರು ಸಂಖ್ಯೆ ನೀಡಿ ನಂಬಿಸುವ ಪ್ರಯತ್ನ ಮಾಡಿದ್ದಾರೆ.

ಸ್ವಲ್ಪ ಸಮಯದ ಬಳಿಕ ವಾಟ್ಸಾಪ್ ವೀಡಿಯೊ ಕಾಲ್ ಮಾಡಿದ ವ್ಯಕ್ತಿ, ತಾನು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ವಿರುದ್ಧ ಕೋಟ್ಯಂತರ ರೂಪಾಯಿ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದೆ. ಉದ್ಯಮಿ ನರೇಶ್ ಗೋಯಲ್ ಪ್ರಕರಣದ ಅಕ್ರಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆ. ನಿಮ್ಮ ಆಧಾರ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ಸುಳ್ಳು ಹೇಳಿ ಭಯಪಡಿಸಿದ್ದ. ತಮ್ಮ ಹೆಸರಿನಲ್ಲಿ ಅಂತಹ ಬ್ಯಾಂಕ್ ಖಾತೆಯೇ ಇಲ್ಲ ಎಂದು ಹೇಳಿದರೂ ವಂಚಕರು, ನೀವು ಈಗ ಡಿಜಿಟಲ್ ಅರೆಸ್ಟ್‌ನಲ್ಲಿದ್ದೀರಿ. ಈ ವಿಚಾರ ಯಾರಿಗೂ ಹೇಳಬಾರದು ಎಂದು ಹೆದರಿಸಿದ್ದರು.

ದಿನವಿಡೀ ವೀಡಿಯೊ ಕಾಲ್ ಮಾಡಿದ್ದಲ್ಲದೆ, ಹಲವು ದಿನಲ ನಿರಂತರವಾಗಿ ವಾಟ್ಸಾಪ್ ವೀಡಿಯೊ ಕಾಲ್‌ನಲ್ಲಿ ಇರಿಸಿ, ಸದಾ ತಮ್ಮ ಮೇಲ್ವಿಚಾರಣೆಯಲ್ಲಿರುವಂತೆ ವಂಚಕರು ಮಾಡಿದ್ದರು. ಆತಂಕಗೊಂಡ ಸಂತ್ರಸ್ತ ವ್ಯಕ್ತಿ ವಂಚಕರು ಹೇಳಿದಂತೆ ತಮ್ಮ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್‌ನಲ್ಲಿದ್ದ ಸ್ಥಿರ ಠೇವಣಿಗಳನ್ನು ಮುರಿದು ಉಳಿತಾಯ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 70,77,000 ರೂ. ವರ್ಗಾಯಿಸಿದ್ದಾರೆ.

ವಂಚಕರು ಜುಲೈ 28ರಂದು ಮತ್ತೆ ವೀಡಿಯೊ ಕಾಲ್ ಮಾಡಿ ಇನ್ನಷ್ಟು ಹಣ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸಂತ್ರಸ್ತ ವ್ಯಕ್ತಿ ವಿಷಯವನ್ನು ಮಗನಿಗೆ ತಿಳಿಸಿದ್ದಾರೆ. ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಗೊತ್ತಾಗಿ ಮೈಸೂರು ನಗರದ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳು ಹಾಗೂ ವಾಟ್ಸಾಪ್ ಕರೆಗಳ ಮೂಲವನ್ನು ಪತ್ತೆಹಚ್ಚುವ ಕೆಲಸ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *