ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿಯಾಗಿ ಆಟೊ ಚಲಾಯಿಸುತ್ತಿದ್ದ ಚಾಲಕನನನ್ನು ಬಂಧಿಸಿರುವ ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ NH-69 ಆಯನೂರು ಗೇಟ್ ಸರ್ಕಲ್ ಸಮೀಪ ಆಟೊವನ್ನು ಚಾಲಕ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದ. ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದೂರು ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಸದರಿ ಪ್ಯಾಸೆಂಜರ್ ಆಟೊವನ್ನು ವಶಕ್ಕೆ ಪಡೆದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಮಾರಾಟ: ಇಬ್ಬರ ಬಂಧನ
ಶಿವಮೊಗ್ಗದ ಅಣ್ಣಾನಗರ ಎಡಭಾಗದ ಚಾನಲ್ ರಸ್ತೆಯಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಟಿಪ್ಪುನಗರದ ತೌಫೀಕ್ ಅಹಮದ್ (33) ಹಾಗೂ ಭದ್ರಾವತಿಯ ಸೈಯ್ಯದ್ ಅಪ್ಸರ್ (26) ಎಂದು ಗುರುತಿಸಲಾಗಿದೆ.
ಪಿಎಸ್‌ಐ ಮಂಜುನಾಥ್ ಎನ್.ಕೆ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 77,000 ಮೌಲ್ಯದ 1 ಕೆಜಿ 420 ಗ್ರಾಂ ಗಾಂಜಾ, ಕಾರು ಹಾಗೂ 7,300 ರೂ. ವಶಪಡಿಸಿಕೊಳ್ಳಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


