ಆಂಧ್ರಪ್ರದೇಶದ ಅರ್ಧದಷ್ಟು ಜಿಲ್ಲೆಗಳಲ್ಲಿ ಕೋವಿಡ್ ವೈರಸ್ ಆತಂಕ ಎದುರಾಗಿದೆ. ತಿರುಪತಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಇತ್ತೀಚೆಗೆ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಎಸ್‌ಟಿವಿ ನಗರ ಪ್ರದೇಶದ 65 ವರ್ಷದ ಮಹಿಳೆ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಇತರ ಪರೀಕ್ಷೆಗಳ ಜೊತೆಗೆ ಕೋವಿಡ್ ಪರೀಕ್ಷೆ ಕೂಡ ನಡೆಸಿದ್ದಾರೆ. ಫಲಿತಾಂಶ ಪಾಸಿಟಿವ್ ಬಂದಿದೆ. ಮಹಿಳೆಯ ಆರೋಗ್ಯವು ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಜಿಲ್ಲಾ ವೈದ್ಯಕೀಯ ಆರೋಗ್ಯ ಅಧಿಕಾರಿ ದೃಢಪಡಿಸಿದ್ದಾರೆ. ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಇಲ್ಲಿಯವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ 302 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ನಾಲ್ಕು ಜನ ವೈರಸ್‌ಗೆ ಬಲಿಯಾಗಿದ್ದಾರೆ. 16 ಸೋಂಕಿತರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. 24 ಮಂದಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಅಗತ್ಯ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಒಟ್ಟು 14 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದಾಗಿ ಮಾಹಿತಿ ನೀಡಿದೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ 11 ಹೊಸ ಪ್ರಕರಣಗಳು ದಾಖಲಾಗಿವೆ. ಗುಂಟೂರು ಜಿಲ್ಲೆಯಲ್ಲಿ ೯ ಮಂದಿಗೆ ಸೋಂಕು ಇದೆ. ವೈಎಸ್‌ಆರ್ ಕಡಪ ಜಿಲ್ಲೆಯಲ್ಲಿ 8 ಜನರು ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ವಿಶಾಖಪಟ್ಟಣದಲ್ಲಿ ಐದು ಮತ್ತು ಎನ್‌ಟಿಆರ್ ಜಿಲ್ಲೆಯಲ್ಲಿ ಮೂರು ಪ್ರಕರಣ ಪತ್ತೆಯಾಗಿವೆ. ಕಾಕಿನಾಡ, ಎಲೂರು, ಬಾಪಟ್ಲ, ಪಾರ್ವತಿಪುರಂ ಮಾನ್ಯಂ ಜಿಲ್ಲೆಗಳಲ್ಲಿ ತಲಾ ಎರಡು ಪ್ರಕರಣಗಳು ದೃಢಪಟ್ಟಿವೆ. ವರದಿಯಾಗಿವೆ. ಅಲ್ಲೂರಿ ಸೀತಾರಾಮ ರಾಜು, ಅನಕಪಲ್ಲಿ, ಕೃಷ್ಣ, ತಿರುಪತಿ, ಶ್ರೀ ಪೊಟ್ಟಿ ಶ್ರೀರಾಮುಲು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಒಂದು ಹೊಸ ಪ್ರಕರಣ ವರದಿಯಾಗಿದೆ. ವೈದ್ಯಕೀಯ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿಯೂ ಪಾಸಿಟಿವ್ ಬಂದ ಜನರ ಸಂಪರ್ಕ ಪತ್ತೆಹಚ್ಚುವ ಕಾರ್ಯ ಚುರುಕುಗೊಳಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ. ರಾಜ್ಯಾದ್ಯಂತ ಸಂಪೂರ್ಣ ಯಂತ್ರೋಪಕರಣಗಳನ್ನು ಸನ್ನದ್ಧಗೊಳಿಸಲಾಗಿದೆ. ಎಲ್ಲಾ ಆಸ್ಪತ್ರೆಗಳು ಸಾಕಷ್ಟು ಜೀವ ಉಳಿಸುವ ಔಷಧಿಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸುಧಾರಿತ ವೆಂಟಿಲೇಟರ್‌ಗಳನ್ನು ಸಜ್ಜುಗೊಳಿಸಿಡುವಂತೆ ಆರೋಗ್ಯ ಇಳಾಖೆ ನಿರ್ದೇಶನ ನೀಡಿದೆ.


