ಜನರ ಧ್ವನಿಯನ್ನು ಕೇವಲ ವಿರೋಧ ಪಕ್ಷಗಳ ರಾಜಕೀಯ ಅಜೆಂಡಾ ಎಂದು ತಳ್ಳಿಹಾಕುವುದು ಸರಿಯಲ್ಲ. ನೀಟ್ ಪರೀಕ್ಷಾ ಹಗರಣಗಳು ಮತ್ತು ಸತತ ಪೇಪರ್ ಲೀಕ್ ಪ್ರಕರಣಗಳಲ್ಲಿ ಕೇವಲ ಕೆಳಹಂತದ ನೌಕರರನ್ನು ಬಲಿಪಶು ಮಾಡುವುದನ್ನು ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಖಂಡಿಸಿದ್ದಾರೆ.
ಸರ್ಕಾರದ ಯಶಸ್ಸಿಗೆ ಉನ್ನತ ನಾಯಕರು ಹೇಗೆ ಶ್ರೇಯಸ್ಸು ಪಡೆದುಕೊಳ್ಳುತ್ತಾರೋ, ಅದೇ ರೀತಿ ಆಡಳಿತಾತ್ಮಕ ವೈಫಲ್ಯಗಳಿಗೂ ಉನ್ನತ ಮಟ್ಟದ ಹೊಣೆಗಾರಿಕೆ ಇರಬೇಕು. ಶಿಕ್ಷಣ ಸಚಿವರ ರಾಜೀನಾಮೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗುವುದಿಲ್ಲ, ಬದಲಾಗಿ ಅದು ಆಡಳಿತದಲ್ಲಿ ಜವಾಬ್ದಾರಿಯ ಬಲವಾದ ಸಂದೇಶ ರವಾನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಹಗರಣಗಳನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಯುವಜನರು ನಡೆಸುತ್ತಿರುವ ಪ್ರತಿಭಟನೆಯು ತೀವ್ರಗೊಂಡಿರುವ ಬೆನ್ನಲ್ಲೇ ಅಣ್ಣಾ ಹಜಾರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಿದಾರೆ.
ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ಮತ್ತು ಹಿಂಸಾಚಾರದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಅವರು, ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಯುವಕರ ಪ್ರತಿಭಟನೆಯನ್ನು ಹತ್ತಿಕ್ಕಲು ಬಲಪ್ರಯೋಗ ಮಾಡುವುದಕ್ಕಿಂತ ರಚನಾತ್ಮಕ ಸಂವಾದ ನಡೆಸುವುದು ಸೂಕ್ತ ಎಂದು ಹಜಾರೆ ಪ್ರತಿಪಾದಿಸಿದ್ದಾರೆ.
ನಿರುದ್ಯೋಗ, ಉದ್ಯೋಗ ಭರ್ತಿಯಲ್ಲಿ ವಿಳಂಬ ಹಾಗೂ ಪರೀಕ್ಷಾ ಹಗರಣಗಳಿಂದ ಮನನೊಂದು ದೇಶಾದ್ಯಂತ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಇದನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡದೆ, ಯುವಜನರ ಆಳವಾದ ನೋವು ಮತ್ತು ಸಾಮಾಜಿಕ ಸಂಕಟವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವುದನ್ನು ಅಣ್ಣಾ ಹಜಾರೆ ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಬಣ್ಣಿಸಿದ್ದಾರೆ. ಯಾವುದೇ ಚರ್ಚೆ ನಡೆಸದೆ ಪ್ರತಿಭಟನೆಗಳನ್ನು ಹತ್ತಿಕ್ಕುವ ಸರ್ಕಾರದ ಧೋರಣೆ ಗಾಂಧೀಜಿಯವರ ಸತ್ಯಾಗ್ರಹ ತತ್ವಗಳಿಗೆ ವಿರುದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.
ದೇಶದ ಯುವಜನರು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿರುವ ಈ ಗಂಭೀರ ಬಿಕ್ಕಟ್ಟನ್ನು ಸರ್ಕಾರವು ಸಂಯಮ, ಸಂವೇದನೆ ಹಾಗೂ ಸಹಿಷ್ಣುತೆಯಿಂದ ಬಗೆಹರಿಸಬೇಕು ಎಂದು ಅಣ್ಣಾ ಹಜಾರೆ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.


