Menu

ಪೌರತ್ವ , ಎಸ್‌ಐಆರ್ ಹಾಗೂ ಸುಪ್ರೀಂಕೋರ್ಟ್

ದೇಶದ ಮತದಾರರಿಗೆ ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಸರ್ಕಾರದ ಸೌಲತ್ತಗಳನ್ನು ಪಡೆಯಲು ಅಧಿಕೃತ ದಾಖಲೆಯಾದರೂ ಇದರ ಗೈರು ಹಾಜರಿಯಲ್ಲಿ ಭಾರತೀಯ ಪೌರತ್ವ ಖಾತರಿಪಡಿಸುವ ಇತರ ದಾಖಲೆಗಳ ಬಗ್ಗೆಯೂ ಸುಪ್ರೀಂಕೋರ್ಟ್ ಈಗ ನಿಖರ ಮಾರ್ಗಸೂಚಿ ರೂಪಿಸುವ ಅನಿವಾರ್ಯತೆ ಒದಗಿದೆ.

ದೇಶದ ಕೆಲ ರಾಜ್ಯಗಳಲ್ಲಿ ಮತದಾರರ ಎಸ್ ಐ ಆರ್ ಪ್ರಕ್ರಿಯೆ ಭರದಿಂದ ಮುಂದುವರಿದಿರುವ ಬೆನ್ನಹಿಂದೆಯೇ ಸರ್ವೋನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಮಹತ್ವ ಪೂರ್ಣವಾದ ಸಂಗತಿಯನ್ನು ಈಗ ಒತ್ತಿಹೇಳಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದ ಮಾತ್ರಕ್ಕೆ ಅಂಥವರನ್ನು ಈ ದೇಶದ ಪೌರ ಅಲ್ಲ ಎನ್ನಲಾಗದು ಎಂಬ ಸಂಗತಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠವೀಗ ಸ್ಪಷ್ಟಪಡಿಸಿದೆ. ಇದು ಒಂದು ರೀತಿಯಲ್ಲಿ ಆತಂಕ ಮತ್ತು ತಳಮಳದಲ್ಲಿರುವ ಲಕ್ಷಾಂತರ ಮಂದಿ ಭಾರತೀಯ ಪೌರರಿಗೆ ನೆಮ್ಮದಿ ಮತ್ತು ನಿರಾಳ ಉಂಟು ಮಾಡಿದೆ. ಚುನಾವಣೆ ಆಯೋಗವು ಸ್ವಾಯತ್ತ ಸಂಸ್ಥೆ . ಇದು ಸಂವಿಧಾನ ಸಂಸ್ಥೆ ಅಲ್ಲ ಎಂದಿರುವ ಸುಪ್ರೀಂಕೋರ್ಟ್ ದೇಶದ ಪ್ರಜೆಯ ಪೌರತ್ವವನ್ನು ತೀರ್ಮಾನಿಸುವ ಸಂಪೂರ್ಣ ಅಧಿಕಾರ ಚು. ಆಯೋಗಕ್ಕೆ ಇಲ್ಲ ಎಂಬುದನ್ನು ನ್ಯಾಯಪೀಠ ಒತ್ತಿ ಹೇಳಿದೆ.

ಕೇಂದ್ರ ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಮತ್ತು ಸರ್ಕಾರಿ ಸೌಲತ್ತು ಪಡೆಯಲು ಕಡ್ಡಾಯ ಎಂಬ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲಿಂದಲೂ ಅನುಸರಿಸುತ್ತಿರುವ ನಿಯಮ. ಆದರೆ ಬದಲಾದ ಸನ್ನಿವೇಶದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಎಸ್ ಐ ಆರ್ ಪ್ರಕ್ರಿಯೆ ಗೊಂದಲದ ಗೂಡಾಗಿ ಪರಿಣಮಿಸಿದ್ದು ಇದಕ್ಕೆ ಸಂಬಂಧಿಸಿದ ನೂರಾರು ವ್ಯಾಜ್ಯಗಳೀಗ ದೇಶದ ವಿವಿಧ ಹೈಕೋರ್ಟ್ , ನ್ಯಾಯಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದಿದೆ. ಪ. ಬಂಗಾಳದಲ್ಲಿ ಈ ಸಂಬಂಧ ಸುಮಾರು ೯೮ ಲಕ್ಷ ಮಂದಿ ಮತದಾರರು ನ್ಯಾಯಮಂಡಳಿ ಮೆಟ್ಟಿಲೇರಿದ್ದು ಈ ಸಮಸ್ಯಗೆ ತಾರ್ಕಿಕ ಅಂತ್ಯವೇ ಸದ್ಯ ಇಲ್ಲದಂತಾಗಿದೆ. ವಿಶೇಷ ಮತಪಟ್ಟಿ ಪರಿಷ್ಕರಣೆ ಎಂಬ ಪ್ರಕ್ರಿಯೆಯನ್ನು ಚುನಾವಣೆ ಆಯೋಗವು ಸಮರ್ಪಕವಾಗಿ ಕೈಗೆತ್ತಿಕೊಂಡಿಲ್ಲ. ಇದರಿಂದ ದೇಶದ ನೈಜ ಮತದಾರರು ಮತಪಟ್ಟಿಯಿಂದ ಬಿಟ್ಟು ಹೋಗುತ್ತಿರುವ ಬಗ್ಗೆ ದೇಶದ ವಿಪಕ್ಷಗಳು ಧ್ವನಿ ಎತ್ತಿದರೂ, ಈ ವಿಚಾರದಲ್ಲಿ ಇನ್ನೂ ನ್ಯಾಯಾಲಯಗಳ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ.

ಮಿಗಿಲಾಗಿ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ಕಡೆ ಎಸ್ ಐ ಆರ್ ಪ್ರಕ್ರಿಯೆ ಮುಂದುವರಿದಿದ್ದು ಈ ದಿಶೆಯಲ್ಲಿ ಹಲವು ಹತ್ತು ಗೊಂದಲಗಳು ಮೂಡಿವೆ. ಅಲ್ಲದೆ ಸರ್ಕಾರ ನೀಡುವ ಹಲವಾರು ಯೋಜನೆಗಳಿಗೂ ಮತದಾರರ ಗುರುತಿನ ಚೀಟಿಗೂ ನೇರ ಸಂಬಂಧವಿದೆ. ಹಾಗಾದರೆ ಈ ದೇಶದ ಜನತೆಯ ಪೌರತ್ವವನ್ನು ನಿರ್ಧರಿಸಲು ಸರ್ಕಾರಗಳ ಬಳಿ ಇರಬೇಕಿರುವ ಇತರೆ ಮಾನದಂಡಗಳೇನು ? ಈ ವಿಚಾರದ ಬಗ್ಗೆಯೂ ಇಂದು ದೇಶದ ರಾಜಕೀಯ ಪಕ್ಷಗಳು ಮತ್ತು ಸಂಸತ್ ಕಾಳಜಿ ವಹಿಸುವ ಅಗತ್ಯವಿದೆ. ದೇಶದ ಮತದಾರರಿಗೆ ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಸರ್ಕಾರದ ಸೌಲತ್ತಗಳನ್ನು ಪಡೆಯಲು ಅಧಿಕೃತ ದಾಖಲೆ. ಇದರ ಗೈರು ಹಾಜರಿಯಲ್ಲಿ ಭಾರತೀಯ ಪೌರತ್ವ ಖಾತರಿಪಡಿಸುವ ಇತರೆ ದಾಖಲೆಗಳ ಬಗ್ಗೆಯೂ ಸುಪ್ರೀಂಕೋರ್ಟ್ ಈಗ ನಿಖರ ಮಾರ್ಗಸೂಚಿಯನ್ನು ರೂಪಿಸುವ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಎಸ್‌ಐ ಆರ್ ಸುತ್ತಲೂ ಹರಡಿರುವ ಹಲವು ಹತ್ತು ಗೊಂದಲಗಳಿಗೆ ಈಗ ಸುಪ್ರೀಂಕೋರ್ಟ್ ಈಗ ಅಂತಿಮ ತೆರೆ ಎಳೆಯ ಬೇಕಿದೆ.

Related Posts

Leave a Reply

Your email address will not be published. Required fields are marked *