ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜುಲೈ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿಯ ಮಾಜಿ, ಹಾಲಿ ಶಾಸಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳ ಕೊಲೆ, ದೌರ್ಜನ್ಯ, ಅಲ್ಪಸಂಖ್ಯಾತರ ಓಲೈಕೆ ಮೀತಿಮಿರಿದೆ. ನಮಗೆ ಕಾಂಗ್ರೆಸ್ ಸರ್ಕಾರ ಬೆನ್ನಿಗೆ ನಿಲ್ಲುತ್ತದೆ ಎಂದು ಮತೀಯ ಶಕ್ತಿಗಳ ದೌರ್ಜನ್ಯ ದಿನೇ-ದಿನೇ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಾವೇರಿಯಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಹಿಂದೂ ಯುವಕನ ಕೈ ಕಡಿದಿದ್ದಾರೆ. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್ ಎನ್ನುವ ಮರಾಠಾ ಸಮುದಾಯದ ವ್ಯಕ್ತಿಯ ಹತ್ಯೆಯಾಗಿದೆ. ಯಲ್ಲಾಪೂರದಲ್ಲಿ ದಲಿತ ಮಹಿಳೆಯ ಹತ್ಯೆ, ಕೊಪ್ಪಳದಲ್ಲಿ ಗವಿಸಿದ್ದಪ್ಪನ ಬರ್ಬರ ಹತ್ಯೆ ಮಾಡಲಾಗಿದ್ದು, ಸರ್ಕಾರ ಹಿಂದೂ ವಿರೋಧಿ ನೀತಿ ಎದ್ದು ಕಾಣುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳ ರಕ್ಷಣೆಗೆ ಬರುತ್ತಿಲ್ಲ. ಆಡಳಿತ ಪಕ್ಷದ ಶಾಸಕರು, ಸಚಿವರ ಹೇಳಿಕೆಯಿಂದ ಮತೀಯ ಶಕ್ತಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಎಸ್ಐಆರ್ ಬಗ್ಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವಿಕರಿಸಿ ಹಗಲು-ರಾತ್ರಿ ಪರಿಷ್ಕರಣೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಪಿಆರ್ಸಿ ನೀಡುತ್ತಿರುವುದು ಖಂಡನಾರ್ಹ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆಯಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತುಂಗಭದ್ರಾ ಗೇಟ್ ಗಳನ್ನು ದುರಸ್ಥಿಗೊಳಿಸಲು 24 ದಿನ ಸಮಯ ತಗೆದುಕೊಂಡರು. ಆದರೆ ಬಿಡದಿಯಲ್ಲಿ ರೈತರ ಜಮೀನು ಕಿತ್ತುಕೊಳ್ಳಲು ರಾಜ್ಯ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಸಿಎಂ ವಿರುದ್ದ ಹರಿಹಾಯ್ದರು.
ಬಿಡದಿಯಲ್ಲಿ ಬಲವಂತವಾಗಿ ಜಮೀನು ಕಿತ್ತುಕೊಳ್ಳುವುದಿಲ್ಲ ಎಂದು ಸಿಎಂ ಹೇಳುತ್ತಾರೆ. ವಾಸ್ತವವಾಗಿ ರಾತ್ರಿ ಹೊತ್ತು ರೈತರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಧಮ್ಕಿ ಹಾಕುವ ಕೆಲಸ ನಡೆಯುತ್ತಿದೆ. ಸಿಎಂ ರೀಯಲ್ ಎಸ್ಟೇಟ್ ಧೋರಣೆಯಿಂದ ಹೊರ ಬಂದಿಲ್ಲ. ಶೇ. 70% ರೈತರು ಒಪ್ಪಿಕೊಂಡರೇ ಭೂಸ್ವಾಧೀನ ಮಾಡಬಹುದು. ವಿರೋಧದ ನಡುವೆ ಭೂಸ್ವಾಧೀನ ಮಾಡುತ್ತಿರುವುದು ಸರಿಯಲ್ಲ ಎಂದರು.
ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಸಿದುಕೊಳ್ಳಬಾರದು. ರೈತರ ಶಾಪಕ್ಕೆ ಬಲಿಯಾಗುತ್ತಿರಿ. ಮುಖ್ಯಮಂತ್ರಿಗಳ ಧೋರಣೆಯನ್ನು ರಾಹುಲ್ ಗಾಂಧಿ ಖಂಡಿಸಿ ರೈತರ ಪರವಾಗಿ ನಿಲ್ಲಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು. ಬೆಂಗಳೂರಿಗೆ ಬಂದಿರುವ ಏರ್ ಪೋರ್ಟ್ ಕನಕಪುರಕ್ಕೆ ಒಯ್ಯಲಿದ್ದಾರೆ. ತುಮಕೂರ ಭಾಗದಲ್ಲಿ ಏರ್ ಪೋರ್ಟ್ ಆದರೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಆಗಲಿದೆ. ತಮ್ಮ ರರಿಯಲ್ ಎಸ್ಟೇಟ್ ದಂಧೆಗಾಗಿ ಕನಕಪುರಕ್ಕೆ ಏರ್ ಪೋರ್ಟ್ ಒಯ್ಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ ಸಂಕನೂರ, ಶರಣು ತಣ್ಣಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಸುರೇಶ ಕಳ್ಳಪ್ಪನವರ, ಬಿಜೆಪಿ ಹಿರಿಯ ಮುಖಂಡ ಎಂ. ಎಸ್ ಕರಿಗೌಡ್ರ, ಭೀಮಸಿಂಗ್ ರಾಠೋಡ್, ಎಂ. ಎಂ ಹಿರೇಮಠ, ಬೂದಪ್ಪ ಹಳ್ಳಿ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ಗದಗ ಜಿಲ್ಲೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಭೀಕರ ಬರಗಾಲವಿದೆ. ಬಿತ್ತನೆ ಮಾಡಿದರೂ ಮೊಳಕೆ ಬರದೇ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ರಕ್ಷಣೆಗೆ ಧಾವಿಸಬೇಕು. ಸಚಿವರು ರೈತರ ಸಮಸ್ಯೆ ಆಲಿಸಿ, ಪರಿಹಾರ ನೀಡಬೇಕು. ಪ್ರಧಾನಿಗೆ ಪತ್ರ ಬರೆದು ಕೈಕಟ್ಟಿ ಕುಳಿತರೇ ರೈತರ ಕಣ್ಣಿರು ಒರೆಸಲು ಸಾಧ್ಯವಿಲ್ಲ ಎಂದಿದ್ದಾರೆ.


