Menu

ಶಿಕ್ಷಕರಿಂದ ದೈಹಿಕ ಮಾಸಿಕ ಕಿರುಕುಳ ಆರೋಪ: ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಶಾಲೆಯಲ್ಲಿ ಶಿಕ್ಷಕರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ತಾಳಲಾಗುತ್ತಿಲ್ಲವೆಂದು ಆರೋಪಿಸಿ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮರಿಯಪ್ಪನಪಾಳ್ಯದಲ್ಲಿರುವ 13 ವರ್ಷದ ವಿದ್ಯಾರ್ಥಿ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಿಕ್ಷಕರೊಬ್ಬರು ಬಾಸುಂಡೆ ಬರುವಂತೆ ಆತನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಶಿಕ್ಷಕರ ಈ ವರ್ತನೆ ಮತ್ತು ಶಾಲಾ ಮಂಡಳಿಯ ನಿರಂತರ ಟಾರ್ಚರ್‌ನಿಂದಾಗಿ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಹೇಳಳಾಗಿದೆ.

ವಿದ್ಯಾರ್ಥಿ ಮರಿಯಪ್ಪನಪಾಳ್ಯದಲ್ಲಿರುವ ತನ್ನ ಮನೆಯ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿದ್ದ ರಭಸಕ್ಕೆ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದು, ನಾಯಂಡಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.

ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ಶಾಲೆಯ ಕಿರುಕುಳವೇ ನಿಖರ ಕಾರಣವೇ ಅಥವಾ ಬೇರೆ ಕಾರಣವಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *