ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಇಬ್ಬರು ಪುತ್ರಿಯರನ್ನು ‘ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್’ ಹುದ್ದೆಗೆ ಅಕ್ರಮವಾಗಿ ನೇಮಕ ಮಾಡಿಕೊಂಡ ಆರೋಪದಡಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿಯರು ಅಕ್ರಮವಾಗಿ ಮೀಸಲಾತಿಯ ಲಾಭ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ವಾರ್ಷಿಕ ಆದಾಯವನ್ನು 40,000 ರೂ. ಎಂದು ಸುಳ್ಳು ಘೋಷಿಸಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಪಡೆದಿದ್ದಾರೆ ಎಂದು ದೂರಲಾಗಿತ್ತು. 2002ರ ಸರ್ಕಾರಿ ಆದೇಶದ ಪ್ರಕಾರ, ಸಾಂವಿಧಾನಿಕ ಹುದ್ದೆಯಲ್ಲಿರುವ ಕೆಪಿಎಸ್‌ಸಿ ಅಧ್ಯಕ್ಷರ ಮಕ್ಕಳು ಇಂತಹ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ ಎಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಲಾಗಿದೆ ಎಂದು ರಾಜ್ಯಪಾಲರ ಸಚಿವಾಲಯ ಸ್ಪಷ್ಟಪಡಿಸಿದೆ.
ಸಂಸ್ಥೆಯ ಘನತೆಯನ್ನು ಕಾಪಾಡಲು ಮತ್ತು ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾಹುಕಾರ್ ವಿರುದ್ಧದ ಆರೋಪಗಳ ಕುರಿತು ಸಂವಿಧಾನದ 317(1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನಿಂದ ತನಿಖೆ ನಡೆಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ಹಿರಿಯ ಸದಸ್ಯ ಬಿ. ಪ್ರಭುದೇವ ಅವರನ್ನು ಅಧ್ಯಕ್ಷರಾಗಿ ನೇಮಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ.


