ಕೊಡಗಿನಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಒಳಹರಿವು ಹೆಚ್ಚಿ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರದಲ್ಲಿ ನೀರಿನ ಮಟ್ಟ 83 ಅಡಿ ದಾಟಿದೆ. ಇದು ಮೈಸೂರು, ಮಂಡ್ಯ ಹಾಗೂ ಸುತ್ತಮುತ್ತಲ ರೈತರು ಹಾಗೂ ಸಾರ್ವಜನಿಕರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 83.64 ಅಡಿ ತಲುಪಿದೆ. ಜಲಾಶಯಕ್ಕೆ 7,531 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಹೊರಹರಿವು 790 ಕ್ಯೂಸೆಕ್ ಇದೆ. ಜಲಾಶಯದಲ್ಲಿ 12.485 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲೂ ನೀರಿನ ಮಟ್ಟ ಏರಿಕೆಯಾಗುವ ನಿರೀಕ್ಷೆ ಇದೆ.
ಮಲೆನಾಡು ಮತ್ತು ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ ಜಲಾಶಯ ಭರ್ತಿಯಾಗಿದೆ. ಹರಿಹರ ತಾಲೂಕಿನ ತುಂಗಭದ್ರಾ ನದಿಗೆ ಶಿವಮೊಗ್ಗದ ತುಂಗಾ ಜಲಾಶಯದಿಂದ ಹೆಚ್ಚುವರಿ ನೀರು ಹರಿದುಬರುತ್ತಿದೆ. ಇದರಿಂದ ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ರೈತರು ಹಾಗೂ ಜನರಲ್ಲಿ ಸಂತಸ ಮೂಡಿದೆ. ವಾರದ ಹಿಂದೆ ಬತ್ತಿ ಹೋಗಿದ್ದ ತುಂಗಭದ್ರಾ ನದಿಯಲ್ಲಿ ಈಗ ಮೂರು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ತುಂಗಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ರಾಜನಹಳ್ಳಿ ಜಾಕ್‌ವೆಲ್ ಮೂಲಕ 22 ಕೆರೆಗಳಿಗೆ ನೀರು ಲಿಫ್ಟ್ ಮಾಡುವ ಪ್ರಕ್ರಿಯೆ ಪುನರಾರಂಭವಾಗಿದೆ. ಜಗಳೂರು, ದಾವಣಗೆರೆ ಹಾಗೂ ಮಾಯಕೊಂಡ ಕ್ಷೇತ್ರದ ಹಲವು ಕೆರೆಗಳಿಗೆ ನೀರು ಪೂರೈಸಲು ಅನುಕೂಲವಾಗಿದೆ. ಭರಮಸಾಗರ ಕೆರೆಗೂ ನೀರು ಎತ್ತುವ ಕಾರ್ಯ ಚುರುಕುಗೊಂಡಿದೆ.
ಮಹಾರಾಷ್ಟ್ರ, ಬೆಳಗಾವಿಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿಯ ಒಳಹರಿವು ೧ ಲಕ್ಷ ಕ್ಯೂಸೆಕ್‌ಗಳ ಗಡಿ ತಲುಪಿದ್ದು, ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಹಿಪ್ಪರಗಿ ಬ್ಯಾರೇಜ್ ಮೂಲಕ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಮೂಲಕ ಹಾದುಹೋಗುವ ಈ ನದಿ ನೀರು ಉತ್ತರ ಕರ್ನಾಟಕದ ಕೃಷಿ ಮತ್ತು ಕುಡಿಯುವ ನೀರಿಗೆ ಪ್ರಮುಖ ಮೂಲವಾಗಿದೆ.


