ನಗರಗಳತ್ತ ಜನರು ವಲಸೆ ಬರುವುದನ್ನು ತಪ್ಪಿಸಲು ನಮ್ಮ ಸರ್ಕಾರ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳ ಸೃಷ್ಟಿಗೆ ಉತ್ತೇಜನ ನೀಡಲು ತೀರ್ಮಾನಿಸಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಿಎಸ್ಆರ್ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಲಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸೃಷ್ಟಿಸಲು ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿ. ಉದ್ಯೋಗಕ್ಕಾಗಿ ಗ್ರಾಮೀಣ ಭಾಗದ ಜನರು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಿ ಅವರು ಇರುವ ಜಾಗದಲ್ಲೇ ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕಲಬುರ್ಗಿ ನಗರ ಸೇರಿದಂತೆ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮದವರನ್ನು ಆಕರ್ಷಿಸಲು 0.6ರಷ್ಟು ಪ್ರಿಮಿಯಂ ಎಫ್ಎಆರ್ ಹಾಗೂ 2 ಪಟ್ಟು ಎಫ್ಎಆರ್ ನೀಡಲು ತೀರ್ಮಾನಿಸಿದೆ. ಇದರಿಂದ ಕಡಿಮೆ ದರದಲ್ಲಿ ಉದ್ಯಮದವರಿಗೆ ಜಾಗ ಸಿಗುವಂತಾಗುತ್ತದೆ. ಇದಕ್ಕೆ ಅಗತ್ಯ ತಿದ್ದುಪಡಿಯನ್ನು ನಗರಾಭಿವೃದ್ಧಿ ಸಚಿವಾಲಯದಿಂದ ತರಲಾಗುವುದು ಎಂದು ತಿಳಿಸಿದರು.
ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ಮಕ್ಕಳು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಿಎಸ್ಆರ್ ಶಾಲೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲು ತೀರ್ಮಾನಿಸಿದ್ದೇವೆ. ಕಂಪನಿಗಳು 10-15 ಕೋಟಿ ಬಂಡವಾಳ ಹಾಕಿ ನಮಗೆ ಶಾಲೆ ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಿದರೆ ಸಾಕು. ಈ ರೀತಿ 2 ಸಾವಿರ ಶಾಲೆಗಳನ್ನು ನಿರ್ಮಿಸಲಾಗುವುದು. ಶಿಕ್ಷಕರ ನೇಮಕ ಪ್ರಕ್ರಿಯೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಖಾಸಗಿ ವಲಯದಲ್ಲಿ ಉದ್ಯೋಗ ನೇಮಕಾತಿ ವಿನಿಮಯ ವ್ಯವಸ್ಥೆಯನ್ನು ರೂಪಿಸಲು ಯುವ ಸೇತು ಯೋಜನೆ ರೂಪಿಸಲಾಗಿದೆ. ಯಾವುದೇ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕಾದರೆ ಈ ಉದ್ಯೋಗ ಸೇತು ಮೂಲಕ ಕೌಶಲ್ಯಾಧಾರಿತ ಯುವಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಅವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಗುವುದು ಎಂದು ಸಿಎಂ ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಿಲ್ಲ
ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದ್ದು, ನಮ್ಮ ಸರ್ಕಾರ ಪಾರದರ್ಶಕವಾಗಿ ಮತದಾರರ ಹಕ್ಕು ಉಳಿಸಲು ತೀರ್ಮಾನಿಸಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮತದಾನದ ಹಕ್ಕು ಉಳಿಸುವುದು ನಮ್ಮ ಸರ್ಕಾರದ ಬದ್ಧತೆ. ಎಸ್ಐಆರ್ ವಿಚಾರವಾಗಿ ನಮ್ಮ ಆಕ್ಷೇಪಗಳನ್ನು ನಾವು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದೇವೆ. ಎಸ್ಐಆರ್ ಗೆ ನಮ್ಮ ಸರ್ಕಾರ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ನೀಡದ ಸಹಕಾರವನ್ನು ನೀಡುತ್ತಿದೆ. ಕಾನೂನು ಹೊರತಾಗಿ ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಬಿಎಲ್ಓಗಳು ಪ್ರತಿ ಮನೆಗೆ ಮೂರು ಬಾರಿ ಸಂಪರ್ಕ ಮಾಡಬೇಕು. ಈ ಪ್ರಕ್ರಿಯೆಯನ್ನು ಬಿಎಲ್ಓಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜನರಿಗೆ ಅಗತ್ಯ ದಾಖಲೆ ಒದಗಿಸಬೇಕು ಎಂಬ ಉದ್ದೇಶದಿಂದ ಉಚಿತವಾಗಿ ನಿವಾಸ ದೃಢೀಕರಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು ಕಾರ್ಯಪಡೆ ರಚಿಸಲಾಗಿದೆ. ಎಲ್ಲಾ ಆರ್ ಒ ಕುಡಿಯುವ ನೀರಿನ ಕೇಂದ್ರಗಳ ಪರಿಶೀಲನೆ ಹಾಗೂ ನೀರಿನ ಗುಣಮಟ್ಟದ ಪರೀಕ್ಷೆ ಮಾಡಲು ಸೂಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಪ್ರತಿ ವರ್ಷ 5 ಸಾವಿರ ಕೋಟಿ ವಿಶೇಷ ಅನುದಾನ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಭಾರತ ಜೋಡೋ ಯುವಕರ ಸಂಘ ನೋಂದಣಿ
ಯುವಕರಲ್ಲಿ ಸಾಮರಸ್ಯ ಮೂಡಿಸಿ ಅವರ ಕಲೆ, ಕ್ರೀಡೆ, ನಾಯಕತ್ವ ಬೆಳಸಿಕೊಳ್ಳಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ ಭಾರತ ಜೋಡೋ ಯುವಕರ ಸಂಘ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಿದೆ. ಮುಂದಿನ ತಿಂಗಳು 15ರ ಒಳಗೆ ಸಂಘಗಳ ನೋಂದಣಿ ಮಾಡಲು ಪ್ರಕ್ರಿಯೆ ಮಾಡಲಾಗುವುದು. ಒಸಿ ಸಿಸಿ ವಿಚಾರದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಲು ಆಗಸ್ಟ್ 15ರವರೆಗೆ ಅವಕಾಶ ನೀಡಲಾಗಿದೆ. ಪ್ರತಿ ಠಾಣೆಗಳಲ್ಲಿ ರೌಡಿ ನಿಗ್ರಹ ಪಡೆ ರಚಿಸಬೇಕು. ಡ್ರಗ್ಸ್ ನಿಯಂತ್ರಣದಲ್ಲಿ ಝೀರೋ ಟಾಲರೆನ್ಸ್ ಇರಲಿ. ಡ್ರಗ್ ನಿಂದ ನಾಡಿನ ಮಕ್ಕಳು ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಪ್ರತಿ ಕ್ಷೇತ್ರದಲ್ಲಿ ಕಂದಾಯ ಇಲಾಖೆ ಜಾಗದಲ್ಲಿ ಬಡವರಿಗಾಗಿ 10 ಸಾವಿರ ನಿವೇಶನ ಹಂಚಿಕೆ, 320 ಕೋಟಿ ಅನುದಾನದಲ್ಲಿ ಜವಳಿ ಪಾರ್ಕ್ ಅನ್ನು ಕಲಬುರ್ಗಿಯಲ್ಲಿ ಆರಂಭ, ಮುಂಗಾರು ಕೊರತೆ ಬೆಳೆ ಪರಿಹಾರ ವಿಮೆ 580 ಕೋಟಿ ಅಂದಾಜು ಮಾಡಲಾಗಿದ್ದು, 243 ಕೋಟಿ ರೂ. ಇತ್ಯರ್ಥ ಆಗಿದೆ. 225 ಕೋಟಿ ರೂ. ಬಿಡುಗಡಗೆ ಆದೇಶ . ಉಳಿದ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಎಂದರು.
ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ರೈತರಿಂದ ವ್ಯಕ್ತವಾಗುತ್ತಿದೆ ಎಂದು ಕೇಳಿದಾಗ,“ಬೇಡಿಕೆಗಳು ಬರುತ್ತಿವೆ. ಆದರೆ ಸಾಲಮನ್ನಾ ಅಷ್ಟು ಸುಲಭವಾದ ಕೆಲಸವಲ್ಲ. ಬೇರೆ ರಾಜ್ಯಗಳು ಮಾಡದೇ ಇದ್ದಾಗಲೂ ನಾವು ಸಾಲ ಮನ್ನಾ ಮಾಡಿದ್ದೇವೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗಲೂ ಮಾಡಿದ್ದೇವೆ. ಈ ವಿಚಾರವನ್ನು ಪರಿಶೀಲನೆ ಮಾಡುತ್ತೇವೆ ಎಂದು ಉತ್ತರಿಸಿದರು.
ಕೃಷಿ ಇಲಾಖೆ ಹುದ್ದೆಗಳು ಖಾಲಿ ಇದ್ದು, ರೈತರಿಗೆ ನೆರವು ಸಿಗುತ್ತಿಲ್ಲ ಎಂದು ಕೇಳಿದಾಗ, ಈ ಕಾರಣಕ್ಕೆ 72 ಸಾವಿರ ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಗೃಹ, ಕೃಷಿ, ಕಂದಾಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ 6 ತಿಂಗಳ ಗಡವು ನೀಡಲಾಗಿದೆ ಎಂದರು.
ಎಸ್ಐಆರ್ ಪ್ರಕ್ರಿಯೆಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ “ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದು, ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಿಬ್ಬಂದಿ ಒದಗಿಸುವುದು ನಮ್ಮ ಜವಾಬ್ದಾರಿ ಅದನ್ನು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.


