ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಭವಿಷ್ಯದಲ್ಲಿ ಎಲ್ಲಾ ಕ್ವಾರಿಗಳಿಗೂ ನಾವು ನಿಯಮ ತರಬೇಕಾಗುತ್ತದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾದಾಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೃತಪಟ್ಟ ಏಳು ಮಂದಿಯ ಪಾರ್ಥಿವ ಶರೀರ ಇರಿಸಿರುವ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಸಿಎಂ ಭೇಟಿ ನೀಡಿ, ಗಾಯಾಳುಗಳು ಹಾಗೂ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಯಾವ ಅಧಿಕಾರಿಗಳ ಮೇಲಾದರೂ ಕ್ರಮ ತೆಗೆದುಕೊಳ್ಳಲಾಗಿದೆಯೇ? ಕ್ವಾರಿ ಮಾಲೀಕರು ಸಿಕ್ಕಿದ್ದಾರೆಯೇ ಎಂದು ಕೇಳಿದಾಗ, ಅಧಿಕಾರಿಗಳ ಮೇಲೆ ಏನು ಮಾಡೋಕಾಗುತ್ತೆ. ಗಣಿಗಾರಿಕೆ ಕಾರ್ಯಸೂಚಿ ಬಗ್ಗೆ ಶೀಘ್ರದಲ್ಲೇ ಸಭೆ ಕರೆದು ಮಾತನಾಡುತ್ತೇನೆ. ಈ ಕಾರ್ಯಸೂಚಿಯ ಅನ್ವಯದ ಪ್ರಕಾರನೇ ಮುಂದಕ್ಕೆ ಕ್ವಾರಿಗಳು ಕೆಲಸ ಮಾಡಬೇಕಾಗುತ್ತದೆ. ಅಧಿಕಾರಿಗಳ ಪ್ರಕಾರ ಗಣಿಗಾರಿಕೆ ಕಾರ್ಯಸೂಚಿ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಎಲ್ಲಾ ಕ್ವಾರಿಗಳಿಗೂ ನಾವು ನಿಯಮ ತರಬೇಕಾಗುತ್ತದೆ. ಈಗ ದುರ್ಘಟನೆ ನಡೆದಿದೆ. ಮುಂದಕ್ಕೆ ಇಂತಹ ಘಟನೆಗಳು ನಡೆಯಬಾರದು ಎಂದು ಮಾರ್ಗದರ್ಶನ ನೀಡುತ್ತೇವೆ ಎಂದರು.
ಎಲ್ಲಾ ವರದಿಗಳನ್ನು ತರಿಸಿಕೊಳ್ಳುತ್ತೇವೆ. ಏನೇನು ಉಲ್ಲಂಘನೆ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಲಾಗುವುದು. ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ಬೇರೆಯವರಿಗೆ ಹೇಗೆ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಲಾಗುವುದೋ ಅದೇ ರೀತಿ ಇಲ್ಲೂ ಮಾಡಲಾಗುವುದು” ಎಂದರು.
ಮೂವರು ಆರೋಪಿಗಳ ಬಂಧನ, ಮುಖ್ಯ ಆರೋಪಿಯ ಪತ್ತೆಗೆ ಕ್ರಮ
ತಾವರೆಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನಿರ್ಲಕ್ಷ್ಯದ ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಕ್ರಷರ್ ಮುಖ್ಯ ಮಾಲೀಕರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ರಷರ್ ಹಾಗೂ ಕ್ವಾರಿ ಇನ್ ಚಾರ್ಜ್ ಲೋಕೇಶ್ ಹಾಗೂ ಕಾವೇರಿ ಕ್ರಷರ್ ನ ಲೋಕಲ್ ಇನ್ ಚಾರ್ಜ್ ರಾಜು ಬಂಧಿತ ಆರೋಪಿಗಳು. ದುರಂತದಲ್ಲಿ ಬದುಕುಳಿದ ಕಾರ್ಮಿಕ ಗೋಪಿಕೃಷ್ಣನ್ ಟಿ. ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ರಮ ಎನ್ನುವುದಕ್ಕೆ ಅವರ ಬಳಿ ದಾಖಲೆ ಏನಿದೆ?
ಎರಡು ಮೂರು ವರ್ಷದಿಂದ ಅಕ್ರಮ ಕ್ವಾರಿಗಳ ಸಂಖ್ಯೆ ಜಾಸ್ತಿ ಆಗಿದೆ. ಇಡೀ ಸರ್ಕಾರವೇ ನಿಯಮಬಾಹಿರ ಸರ್ಕಾರ ಎಂದು ವಿಪಕ್ಷ ನಾಯಕ ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, ಎಲ್ಲರೂ ಅವರ ಕಡೆಯವರೇ ಮಾಡುತ್ತಾ ಇರೋದಲ್ಲವೇ? ಎಲ್ಲಾ ಕಡೆ ಅಕ್ರಮ ಗಣಿಗಾರಿಕೆ ಅನ್ನುವುದಕ್ಕೆ ಅವರ ಬಳಿ ದಾಖಲೆ ಏನಿದೆ? ಕ್ವಾರಿಗಳನ್ನು ನೀವೆಲ್ಲಾ (ಮಾಧ್ಯಮದವರು) ನೋಡಿದ್ದೀರಿ. ಅವರೆಲ್ಲಾ ಒಂಡೆರಡು ವರ್ಷದಿಂದ ಮಾಡಿರುವ ಕೆಲಸವೇ? ಇಪ್ಪತ್ತು ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸರ್ಕಾರಗಳ ಕಾಲದಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಗಾಯಗೊಂಡವರ ಪರಿಸ್ಥಿತಿ ಹೇಗಿದೆ ಎಂದು ಕೇಳಿದಾಗ, ಲೈಸೆನ್ಸ್ ಕ್ವಾರಿಗಳನ್ನು ನಡೆಸಲಾಗುತ್ತಿದೆ. ಘಟನೆ ನಡೆದ ಸ್ಥಳದ ಫೋಟೊಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಬೆಳಗ್ಗೆ 7 ಗಂಟೆ ಹೊತ್ತಿಗೆ ದುರ್ಘಟನೆ ನಡೆದಿದೆ. 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 5 ಮಂದಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಒಬ್ಬರಿಗೆ ಗಂಬೀರ ಗಾಯವಾಗಿದೆ. ಮೃತಪಟ್ಟವರಲ್ಲಿ ಒಬ್ಬರು ಯಾದಗಿರಿ ಜಿಲ್ಲೆಯವರು, ಮಿಕ್ಕವರು ಹೊರ ರಾಜ್ಯದ ಕಾರ್ಮಿಕರು. ಅವರ ಕುಟುಂಬದವರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಮೃತದೇಹಗಳನ್ನು ಕಳಿಸುವ ಕೆಲಸ ಮಾಡಲಾಗುವುದು ಎಂದರು.
ಸರ್ಕಾರದಿಂದ ನಿಯಮಾನುಸಾರ ಪರಿಹಾರ ವಿತರಣೆ ಮಾಡಲಾಗುವುದು. ಕ್ವಾರಿ ಮಾಲೀಕರಿಂದಲೂ ಪ್ರತ್ಯೇಕವಾಗಿ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.


