ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಹೊಂಗಸಂದ್ರದ ಮುನಿಯಪ್ಪ ಲೇಔಟ್‌ನಲ್ಲಿ ಒಂಟಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಭಾರತ ಮೂಲದ ಕೃಷ್ಣ ಬರ್ಮನ್ (40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಹೊಂಗಸಂದ್ರದ ಮುನಿಯಪ್ಪ ಲೇಔಟ್‌ನಲ್ಲಿರುವ ಒಂದು ಸಣ್ಣ ಕೊಠಡಿಯಲ್ಲಿ ಆಕೆ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಕೃಷ್ಣ ಬರ್ಮನ್ ಅವರನ್ನು ಯಾರೋ ತಿಳಿದವರೇ ಕಳ್ಳತನದ ಉದ್ದೇಶದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಆಕೆಯ ಕೊಠಡಿಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರು, ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದು ನೋಡಿದಾಗ, ಕೃಷ್ಣ ಬರ್ಮನ್ ಮೃತಪಟ್ಟಿರುವುದು ಪತ್ತೆಯಾಗಿದೆ.
ಮದುವೆ ನಿರಾಕರಿಸಿದ ಪ್ರೇಯಸಿಯ ಕೊಲೆ
ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಅಂಜಲಿ (23) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಿಯಕರ ರಾಜೀವ್ ಕೊಲೆ ಆರೋಪಿ. ಒಂದೇ ಕಡೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿ, ಪ್ರೀತಿಸಲಾರಂಭಿಸಿದ್ದರು. ಅಂಜಲಿ ಮತ್ತು ರಾಜೀವ್ ಇಬ್ಬರ ಕುಟುಂಬಗಳಿಗೂ ಈ ಪ್ರೀತಿಯ ಬಗ್ಗೆ ತಿಳಿದಿತ್ತು.
ರಾಜೀವ್‌ಗೆ ಕ್ರಿಮಿನಲ್ ಹಿನ್ನಲೆ ಇತ್ತು. ಈ ಕಾರಣಕ್ಕೆ ಅಂಜಲಿಯ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ. ಅಂಜಲಿ ಕುಟುಂಬದವರ ಒತ್ತಾಯಕ್ಕೆ ಮಣಿದು ರಾಜೀವ್‌ನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ರಾಜೀವ್ ಅಂಜಲಿಯನ್ನು ಊಟಕ್ಕಾಗಿ ಸಂಜೆ ಪೈಪ್ ಲೈನ್ ರಸ್ತೆಗೆ ಕರೆದುಕೊಂಡು ಬಂದಿದ್ದ, ಮದುವೆಯ ಬಗ್ಗೆ ಮಾತನಾಡಿದಾಗ ಅಂಜಲಿ ನಿರಾಕರಿಸಿದ್ದಾಳೆ, ಇಬ್ಬರ ನಡುವೆ ಗಲಾಟೆಯಾಗಿದೆ. ಕೋಪದಲ್ಲಿ ರಾಜೀವ್, ಅಂಜಲಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸ್ಥಳೀಯರು ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ.


