ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕಿದೆ.
ದಕ್ಷಿಣ ರಾಜ್ಯಗಳ ಮೂವರು ಮುಖ್ಯಮಂತ್ರಿಗಳು ಒಂದೇ ವೇದಿಕೆಯ ಮೇಲೆ ಅಂತಾರಾಜ್ಯ ಜಲ ವಿವಾದಗಳ ಪರಿಹಾರಕ್ಕೆ ದನಿಗೂಡಿಸಿ ಮಾತನಾಡಿರುವುದು ಐತಿಹಾಸಿಕ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರವಲ್ಲದೆ ಪುದುಚ್ಚೇರಿಯನ್ನು ಕಳೆದ ಐದು ದಶಕಗಳಿಂದಲೂ ಪೀಡಿಸಿರುವುದು ಜೀವನದಿಗಳಾದ ಕೃಷ್ಣಾ, ಕಾವೇರಿ, ಗೋದವರಿ ಎಂದರೆ ತಪ್ಪಲ್ಲ. ದಕ್ಷಿಣ ಭಾರತದಲ್ಲಿ, ರಾಜ್ಯಗಳ ನಡುವೆ ಇದ್ದಷ್ಟು ನದಿ ನೀರಿನ ಸಮಸ್ಯೆ ಉತ್ತರ ಭಾರತದಲ್ಲಿ ಇಲ್ಲ.
ಕೃಷ್ಣಾ – ಕಾವೇರಿ ಜಲ ವಿವಾದದ ಮಾತುಕತೆ ಕುರಿತು ಇಪ್ಪತ್ತು ವರ್ಷಗಳ ಹಿಂದೆ ದೇಶದ ಅಂದಿನ ಪ್ರಧಾನಿಯೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದ ಮಾತೊಂದು ಇಲ್ಲಿ ಉಲ್ಲೇಖಾರ್ಹ. ರಾಜ್ಯ- ರಾಜ್ಯಗಳ ನಡುವೆ ತಲೆದೋರುವ ನದಿ ನೀರಿನ ಹಂಚಿಕೆ ಸಮಸ್ಯೆಗಳನ್ನು, ಆಯಾ ರಾಜ್ಯಗಳೇ ಒಂದು ಕಡೆ ಕುಳಿತು, ಪರಸ್ಪರ ಮಾತುಕತೆ ನಡೆಸಿ ಯಾಕೆ ಜಲವಿವಾದವನ್ನು ಬಗೆಹರಿಸಿಕೊಳ್ಳಬಾರದು ? ಇದೇ ಮಾತನ್ನು ಇಂದು ಕೇಂದ್ರ ಜಲಶಕ್ತಿ ಮಂತ್ರಿ ಸಿ ಆರ್ ಪಾಟೀಲ್ ಹೇಳಿರುವುದು ಗಮನಾರ್ಹ. ಏಕೆಂದರೆ ಕಳೆದ ನಾಲೈದು ದಶಕಗಳಿಂದ ಈ ಜಲವಿವಾದಗಳ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರ ದಿಲ್ಲಿ ಕೋರ್ಟು ಮತ್ತು ನ್ಯಾಯಾಧಿಕರಣಗಳ ಸುತ್ತಲೂ ಗಿರಕಿ ಹೊಡೆದು ಸುಸ್ತಾಗಿ ಖಜಾನೆಯಿಂದ ಸಾಕಷ್ಟು ಹಣವನ್ನೂ ಕಳೆದುಕೊಂಡಿದೆ. ಸುಪ್ರೀಂಕೋರ್ಟ್ ವಕೀಲರಿಗೆ ಈ ದಿಶೆಯಲ್ಲಿ ಖರ್ಚಾದ ಹಣ ಬಹಳಷ್ಟು. ಆದರೆ ರಾಜ್ಯಕ್ಕೆ ದೊರೆತ ಪರಿಹಾರ ಮಾತ್ರ ಅತ್ಯಲ್ಪ.
ತುಂಗಭದ್ರಾ ವೇದಿಕೆಯಲ್ಲಿ ಈಗ ನಡೆದಿರುವ ರಾಜ್ಯಗಳ ಸಮ್ಮಿಲನ ಸಾಂಕೇತಿಕ. ಇದು ಕೇವಲ ಆರಂಭವಷ್ಟೇ ಆಗಬಾರದು. ಕಾವೇರಿ ಕಣಿವೆಯ ಬೃಹತ್ ನೀರಾವರಿ ಸಮಸ್ಯೆಗಳಿಗೂ ಇದೇ ಮಾದರಿಯ ಪರಿಹಾರಗಳನ್ನು ಕರ್ನಾಟಕವಿಂದು ಕಂಡುಕೊಳ್ಳಬೇಕಿದೆ. ಒಂದು ಟಿಎಂಸಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಎರಡು ರಾಜ್ಯಗಳು ವರ್ಷಾನುಗಟ್ಟಳೆ ಸುಪ್ರೀಂಕೋರ್ಟ್ ಮುಂದೆ ಬಡಿದಾಡಿಕೊಳ್ಳುವ ಬದಲಾಗಿ ಇಬ್ಬರೂ ಒಂದು ಕಡೆ ಕುಳಿತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಲುವ ಮನೋಧೋರಣೆ ಇನ್ನಾದರೂ ಬಲಗೊಳ್ಳಲಿ. ನದಿ ನೀರಿನ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಿತಾಸಕ್ತಿ ಮುಖ್ಯವಲ್ಲ. ರಾಜ್ಯಗಳ ಮತ್ತು ರೈತರ ಒಟ್ಟಾರೆ ಹಿತಾಸಕ್ತಿ ಅತಿಮುಖ್ಯ. ಕೊಡು, ಕೊಳ್ಳುವ ಪ್ರವೃತ್ತಿಯಿಂದ ಮಾತ್ರ ಈ ವಿಚಾರದಲ್ಲಿ ಉಭಯ ರಾಜ್ಯಗಳ ನಡುವೆ ಸಾಮರಸ್ಯ ಸಾಧಿಸಲು ಸಾಧ್ಯ.
ತಮಿಳುನಾಡಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಾಳಜಿ ವಹಿಸಿದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಹೊಗೆನಕಲ್ ಯೋಜನೆಗೆ ಹಸಿರುನಿಶಾನೆ ತೋರಿದರು. ಇದರಿಂದ ಇಂದು ಧರ್ಮಪುರಿ, ದಿಂಡಿಗಲ್ ಸುತ್ತಲಿನ ಜನತೆಗೆ ಕುಡಿಯುವ ನೀರಿನ ಖಾಯಂ ಆಸರೆ ದೊರೆತಂತಾಗಿದೆ. ಅಂದು ಪಟೇಲರು ಈ ಔದಾರ್ಯತೆಯನ್ನು ತೋರದೆ ಇದ್ದಿದ್ದರೆ ಇದು ಇಂದಿಗೂ ಸಮಸ್ಯೆಯಾಗಿಯೇ ಉಳಿಯುತ್ತಿತ್ತು. ಒಟ್ಟಿನಲ್ಲಿ ಅಂದು ಪಟೇಲ್ ಅವರು ತೋರಿದ ಉದಾರತೆಯನ್ನು ಇಂದು ತಮಿಳುನಾಡು ಮೇಕೆದಾಟು ವಿಚಾರದಲ್ಲಿ ಪ್ರದರ್ಶಿಸಬೇಕಿದೆ. ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕಿದೆ.


