ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ ಐವರು ಮುಳುಗಿ ಮೃತಪಟ್ಟಿದ್ದಾರೆ. ಮೃತರು ರಾಮನಗರದ ಚನ್ನಪಟ್ಟಣದಿಂದ ಇಲ್ಲಿಗೆ ಪ್ರವಾಸಿಗಳಾಗಿ ಬಂದಿದ್ದವರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಕುಟುಂಬ ಮುತ್ತತ್ತಿಯ ಮುತ್ತತ್ತಿರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮುಗಿಸಿ ಕಾವೇರಿ ನದಿ ತೀರಕ್ಕೆ ತೆರಳಿದ್ದಾರೆ. ನದಿ ಮಧ್ಯೆ ನಿಂತು ಪೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರೆಲ್ಲರೂ ಚನ್ನಪಟ್ಟಣದ ಒಂದೇ ಕುಟುಂಬದವರಾಗಿದ್ದು, ವಿಜಯಮ್ಮ (50), ಶ್ವೇತಾ (38), ಪ್ರಿಯಾಂಕ (28), ಚೈತ್ರ (20) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಪೋಟೊ ತೆಗೆದುಕೊಳ್ಳುವ ಆತುರದಲ್ಲಿ ಒಬ್ಬರು ನೀರಿಗೆ ಜಾರಿದ್ದು, ಅವರನ್ನು ಉಳಿಸಲು ಹೋದ ಉಳಿದವರು ನೀರಿನ ಸುಳಿಗೆ ಸಿಲುಕಿದ್ದಾರೆ.
ಸ್ಥಳೀಯರು ಮತ್ತು ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.


