ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆಯ ಮತದಾನದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಮೈತ್ರಿಕೂಟವನ್ನು ಪರಿಗಣಿಸದೆ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾನು ನನ್ನ ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್‌ಗೆ ಚಲಾಯಿಸಿದ್ದೇನೆ. ನಿನ್ನೆವರೆಗೂ ಮೂರೂ ಪಕ್ಷಗಳ ಯಾವ ನಾಯಕರು ಯಾರೂ ನನ್ನನ್ನು ಸಂಪರ್ಕಿಸಿರಲಿಲ್ಲ. ಸಂಜೆ ಸಿಎಂ ನನ್ನನ್ನು ಸಂಪರ್ಕಿಸಿ, ರೆಸಾರ್ಟ್‌ಗೆ ಕರೆಸಿಕೊಂಡು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ್ದರು.
ಬಿಜೆಪಿ , ಜೆಡಿಎಸ್ ಪಕ್ಷಗಳ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿಗೋಸ್ಕರ ನಾನು ಕಾಂಗ್ರೆಸ್‌ಗೆ ಮತ ನೀಡಿದ್ದೇನೆ. ಈ ಹಿಂದೆ ನಾವು ಬಿಜೆಪಿಗೆ ಹೋಗಿದ್ದಕ್ಕೇ ಅಲ್ಲಿ ಸರ್ಕಾರ ಬಂದಿದ್ದು, ನಮ್ಮಿಂದಲೇ ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು ಎಂಬುದನ್ನು ಯಾರೂ ಮರೆಯಬಾರದು ಎಂದು ಸೋಮಶೇಖರ್ ಹೇಳಿದ್ದಾರೆ.
ಮತ್ತೊಬ್ಬ ಬಿಜೆಪಿಯ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಪರವಾಗಿಯೇ ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ನನ್ನ ಪರವಾಗಿಯೇ ಮತ ಚಲಾಯಿಸಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಜಿಟಿ ದೇವೇಗೌಡರು ಯಾವ ಪಕ್ಷಕ್ಕೆ ಮತ ಹಾಕಿರುವುದು ಎಂದು ಬಹಿರಂಗಪಡಿಸಿಲ್ಲ, ಆತ್ಮಸಾಕ್ಷಿಗೆ ಮತ ಹಾಕಿದ್ದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.


