Menu

ವ್ಯಕ್ತಿಯ ಕೊಲೆಗೈದು ಬೈಕ್‌ನಲ್ಲಿ ಶವ ಸಾಗಿಸುವಾಗ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಸ್ನೇಹಿತ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸ್ನೇಹಿತರು ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಮಾಡಿ ಶವವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸಾಗಿಸುವ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ವ್ಯಕ್ತಿ.

ಸ್ನೇಹಿತನ ಪತ್ನಿಗೆ ಮೆಸೇಜ್ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಸೇರಿ ಮಹೇಶ್ ದೇಹಕ್ಕೆ ಚಾಕು ಇರಿದು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಾಮನಾಥಮೋಳೆ ಗ್ರಾಮದ ರಾಜೇಶ್ ಬಂಧಿತ ಆರೋಪಿ. ಮಹೇಶ್ ಭೀಮನಹಳ್ಳಿಯಲ್ಲಿರುವ ಅಕ್ಕನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ರಾಜೇಶ್ ಕರೆ ಮಾಡಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಇತರ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾಗಿ ಮೃತನ ಸಹೋದರಿ ರತ್ನಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್‌ನ ಸ್ನೇಹಿತನ ಪತ್ನಿಗೆ ಮಹೇಶ್ ಮೆಸೇಜ್ ಮಾಡುತ್ತಿದ್ದಾನೆ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದ್ದರೂ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹೇಶ್‌ನ ಶವವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಭೀಮನಹಳ್ಳಿಯಿಂದ ಸುಲ್ತಾನ್ ರಸ್ತೆ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ಆರೋಪಿಗಳು ಹೊರಟಿದ್ದರು. ಪಟ್ಟಣದಲ್ಲಿ ಸೆಸ್ಕಾಂ ಕಚೇರಿ ಮುಂದೆ ಬಂದಾಗ ಬೈಕ್‌ ಪೆಟ್ರೋಲ್ ಮುಗಿದು ನಿಂತುಹೋಗುತ್ತದೆ. ಬೈಕ್ ಮೇಲೆ ರಕ್ತದ ಮಡುವಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ನೋಡಿ ಸಾರ್ವಜನಿಕರಿಗೆ ಅನುಮಾನ ಬಂದು ವಿಚಾರಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದಾನೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ.

ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಹೇಶ್ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಧಾವಿಸಿ ರಾಜೇಶ್‌ನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *