ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದು, ಜಿಬಿಎ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊದಲ ಸಭೆಯಲ್ಲಿ ಮುಖ್ಯವಾಗಿ ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಸದ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಲ ಕ್ರಿಯಾಶೀಲತೆ ಬಗ್ಗೆ ಪ್ರಶ್ನಿಸಿ, ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ, ನೆರೆ ರಾಜ್ಯಗಳಲ್ಲಿ ರಸ್ತೆ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡಿ ಎಂದರು.
ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ ಆಗೋದಿಲ್ವಾ, ನೆರೆ ರಾಜ್ಯಗಳಲ್ಲಿ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದು ಜಿಬಿಎ ಇಂಜಿನಿಯರ್ಗಳನ್ನು ಪ್ರಶ್ನಿಸಿದರು.
ಮೊದಲ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಬೆಂಗಳೂರಿನ ಅಧಿಕಾರಿಗಳೊಂದಿಗೆ ಐದು ನಗರ ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿದ್ದೇನೆ. ಇವತ್ತಿನಿಂದ ಸಭೆ ಮೂಲಕ ಕೆಲಸ ಆರಂಭ ಮಾಡಿದ್ದೇನೆ. ಬೆಂಗಳೂರಿನ ಸಮಸ್ಯೆ ನಮಗೆಲ್ಲ ಗೊತ್ತಿರೋ ವಿಚಾರ. ಬೆಂಗಳೂರು ನಮ್ಮ ಇಡೀ ದೇಶ ಹಾಗೂ ಪ್ರಪಂಚಕ್ಕೆ ಬೇಕಾಗಿರೋ ಆಸ್ತಿ. ಇಲ್ಲಿ ವಾಸ ಮಾಡುವ ಜನರ ದೈನಂದಿನ ಜೀವನ ಸುಧಾರಣೆ ಆಗಬೇಕು. ರಸ್ತೆ, ಟ್ರಾಫಿಕ್, ಗಾರ್ಬೆಜ್, ಬೆಂಗಳೂರಿನ ಸೌಂದರ್ಯ, ಸ್ವಚ್ಛತೆ ಹೀಗೆ ಹಲವು ಸಮಸ್ಯೆಗಳಿವೆ. ಒಂದೇ ಬಿಬಿಎಂಪಿ ಇದ್ರೆ ಸುಧಾರಣೆ ಕಷ್ಟವೆಂದು ಐದು ನಗರ ಪಾಲಿಕೆ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಮೂರು ವರ್ಷಗಳ ಸತತ ಪ್ರಯತ್ನದಿಂದ ಡಿಕೆ ಶಿವಕುಮಾರ್ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.
ಕಸದ ವಿಚಾರದಲ್ಲಿ ಜನರೂ ಸಹಕಾರ ನೀಡಬೇಕಿರುವುದು ಅತ್ಯಗತ್ಯ, ವ್ಯವಸ್ಥೆಯಲ್ಲಿಯೂ ಲೋಪದೋಷ ಇದೆ. ಕಸದ ಟೆಂಡರ್ ವಿಚಾರವಾಗಿ ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಆ ಸಮಿತಿ ಎಲ್ಲವನ್ನೂ ಗಮನಿಸುತ್ತದೆ,. ಸಮಿತಿ ಏನಾದರೂ ಸಲಹೆ ಸೂಚನೆ ಕೊಟ್ಟರೆ ಪಾಲಿಸುತ್ತೇವೆ ಎಂದು ಹೇಳಿದರು.


