ರಾಜ್ಯದಲ್ಲಿ ಹೊಸ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಸುಮಧುರ ಬಾಂದವ್ಯ ಏರ್ಪಡುವುದು ಅಗತ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಡಿಕೆಶಿ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಈಗಿನ ಸಮಸ್ಯೆ ಆಗ ಬಂದಿರಲಿಲ್ಲ. ಈಗ ಇಬ್ಬರೂ ಹುದ್ದೆಗಳಿಗೆ ಹೊಸಬರು. ಇವರಿಬ್ಬರ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ರಾಜಕೀಯದಲ್ಲಿ ನಡೆಯುವುದು ಸಹಜ. ಇದಕ್ಕೆ ಇಬ್ಬರೂ ಅವಕಾಶ ನೀಡಬಾರದು. ಅದರಲ್ಲೂ ಬಿ.ಕೆ. ಹರಿಪ್ರಸಾದ್ ಡಿಕೆಶಿಗೆ ಹೆಚ್ಚಿನ ಅವಕಾಶ ನೀಡುವುದು ಇಂದಿನ ಅಗತ್ಯ.
ಡಿಕೆಶಿ ಅವರಿಗೆ ಸರ್ಕಾರ ಮತ್ತು ಪಕ್ಷದ ಸಂಘಟನೆ ಎರಡೂ ತಿಳಿದಿದೆ. ಅದರಿಂದ ಅವರಿಗೆ ಉತ್ತಮ ಆಡಳಿತ ನೀಡುವ ಅವಕಾಶಗಳಿವೆ. ಅಲ್ಲದೆ ಇನ್ನು ಎರಡು ವರ್ಷಗಳಲ್ಲಿ ಚುನಾವಣೆ ಬರುವುದರಿಂದ ಅಷ್ಟರಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಇಬ್ಬರ ಮೇಲೂ ಇದೆ. ಅದರಿಂದ ಹೈಕಮಾಂಡ್ ಇಬ್ಬರಿಗೂ ಪೂರ್ಣ ಸ್ವಾತಂತ್ರ್ಯ ನೀಡಿ ಪಕ್ಷ ಮತ್ತು ಸರ್ಕಾರದ ನಡುವೆ ಸುಮಧುರ ವಾತಾವರಣ ಮೂಡುವಂತೆ ಮಾಡುವುದು ಅಗತ್ಯ.
ಗ್ರೇಟರ್ ಬೆಂಗಳೂರು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ ಒಳಗೆ ಚುನಾವಣೆ ನಡೆಸಿದರೆ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮೂಡುತ್ತದೆ. ಅಲ್ಲದೆ ಅಧಿಕಾರ ವಿಕೇಂದ್ರೀಕರಣವೂ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ತಲೆ ಎತ್ತಲು ಉತ್ತಮ ಅವಕಾಶಗಳು ಈಗ ಕಂಡುಬರುತ್ತವೆ. ಕೇರಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ. ಅಲ್ಲದೆ ತಮಿಳುನಾಡಿನಲ್ಲಿ ಜೋಸಫ್ ವಿಜಯನ್ ಜತೆ ಅಧಿಕಾರ ಹಂಚಿಕೊಂಡಿರುವುದರಿಂದ ದಕ್ಷಿಣದ ಧ್ವನಿಗೆ ಈಗ ಮಹತ್ವ ಬಂದಿದೆ.
ಕೇಂದ್ರ ಸರ್ಕಾರ ಹಣಕಾಸು ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ನ್ಯಾಯ ಒದಗಿಸುತ್ತಿಲ್ಲ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಅದಕ್ಕೆ ಈಗ ವ್ಯವಸ್ಥಿತ ರೂಪ ಕೊಡುವ ಅಗತ್ಯವಿದೆ. ಉತ್ತರ ಭಾರತದ ರಾಜ್ಯಗಳ ಸಮಸ್ಯೆಯೇ ಬೇರೆ ದಕ್ಷಿಣ ರಾಜ್ಯಗಳ ಸಮಸ್ಯೆಗಳೇ ಬೇರೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಒಂದೇ ನೀತಿ ಅನುಸರಿಸಲು ಬರುವುದಿಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಬಲ್ಯ ಅಧಿಕ. ಅದನ್ನು ದಕ್ಷಿಣ ರಾಜ್ಯಗಳ ಮೇಲೆ ಹೇರಲು ಬರುವುದಿಲ್ಲ. ಅದೇರೀತಿ ಆರ್ಥಿಕ ಸಮಸ್ಯೆಗಳು ಕೂಡ ವಿಭಿನ್ನ. ಐಟಿ ಬಿಟಿ ಕಂಪನಿಗಳು ದಕ್ಷಿಣದಲ್ಲಿ ಹೆಚ್ಚು ನೆಲೆಸಿರುವುದರಿಂದ ವಿದೇಶಿ ವಿನಿಮಯ ಬರುವುದು ದಕ್ಷಿಣ ಭಾರತದಿಂದ ಎಂಬುದನ್ನು ಕೇಂದ್ರ ಮರೆಯಬಾರದು. ಎಷ್ಟು ತೆರಿಗೆ ಬರುತ್ತದೋ ಅದನ್ನು ಮಾನದಂಡವಾಗಿಟ್ಟುಕೊಂಡು ಅನುದಾನ ನೀಡುವುದೂ ಅಗತ್ಯ. ಇದರೊಂದಿಗೆ ಈಗ ದಕ್ಷಿಣ ಭಾರತದಲ್ಲಿ ಯುವ ಪಡೆಯ ಸಂಖ್ಯೆ ಇಳಿಮುಖಗೊಳ್ಳುತ್ತಿರುವುದೂ ಆತಂಕ ಮೂಡಿಸಿದೆ.
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ೪ ಮಕ್ಕಳನ್ನು ಹಡೆಯುವವರಿಗೆ ಹೆಚ್ಚಿನ ಹಣಕಾಸು ನೆರವು ನೀಡುವುದಾಗಿ ಪ್ರಕಟಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತಿದೆ. ಇದೆಲ್ಲವನ್ನೂ ಗಮನಿಸಿದಾಗ ಕಾಂಗ್ರೆಸ್ ಹೈಕಮಾಂಡ್ ತನ್ನ ಕೈಯಲ್ಲಿರುವ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಟ್ಟು ರಾಜ್ಯ ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶ ಮಾಡಿಕೊಡಬೇಕು. ಬೆಂಗಳೂರು- ಹೈದರಾಬಾದ್- ಚೆನ್ನೈ- ತಿರುವನಂತಪುರದ ನಡುವೆ ಸುಲಭ ಸಾರಿಗೆ ವ್ಯವಸ್ಥೆಯಾದರೆ ಆರ್ಥಿಕ ಬೆಳವಣಿಗೆ ಸಾಧ್ಯ. ದಕ್ಷಿಣ ರಾಜ್ಯಗಳು ಒಂದುಗೂಡಿದಲ್ಲಿ ಕೇಂದ್ರದ ತಾರತಮ್ಯ ಧೋರಣೆಗೆ ಬ್ರೇಕ್ ಹಾಕಬಹುದು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಕಾಂಗ್ರೆಸ್ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವಂತೆ ದಕ್ಷಿಣದ ಬಲವನ್ನೂ ಅಧಿಕಗೊಳಿಸಬಹುದು. ಕಾಂಗ್ರೆಸ್ಸಿಗೆ ಈಗ ಸುವರ್ಣಕಾಲ. ಡಿಕೆ-ಬಿಕೆ ಸಮನ್ವಯ ತರಲಿದೆ ಹೊಸ ಪರ್ವ.


