ಮನೆಯಲ್ಲೇ ಕುಳಿತು ಸ್ವ ಉದ್ಯೋಗದ ಮೂಲಕ ಕೈತುಂಬಾ ಸಂಪಾದಿಸಿ ಎಂಬ ಜಾಹೀರಾತು ಇದ್ದ ಬದ್ದ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದ್ದ ನೂರಾರು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಭಾರಿ ವಂಚನೆಯಾಗಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ.
ಹಾವೇರಿಯ ಅಶ್ವಿನಿ ನಗರದಲ್ಲಿ SLV ಮಹಿಳಾ ಮಾರ್ಟ್ ಹೆಸರಿನ ಕಂಪನಿಯು ಸ್ವಯಂ ಉದ್ಯೋಗ ನೀಡುವ ಆಸೆ ತೋರಿಸಿ, ಮಹಿಳೆಯರಿಂದ 5 ರಿಂದ 10 ಕೋಟಿ ರೂಪಾಯಿ ಹಣ ಸಂಗ್ರಹಿಸಿ ರಾತ್ರೋರಾತ್ರಿ ಪರಾರಿಯಾಗಿದೆ. ವಿನಾಯಕ ಆನ್ವೇರಿ ಹಾಗೂ ರಮ್ಯ SLV ಮಹಿಳಾ ಮಾರ್ಟ್ ಕಂಪನಿಯ ಮಾಲೀಕರು. ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಗೃಹ ಕೆಲಸ ನೀಡುತ್ತೇವೆ. ಇದಕ್ಕೆ ಬಂಡವಾಳ ಹೂಡಿಕೆ ಮಾಡಬೇಕು ಎಂದು ಈ ವಂಚಕರು ನಂಬಿಸಿದ್ದರು. ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡಿ ನಂಬಿಕೆ ಹುಟ್ಟಿಸಿದ್ದರು.
ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಮಹಿಳೆಯರು ಲಕ್ಷಾಂತರ ರೂಪಾಯಿ ಹಣ ತಂದು ಹೂಡಿಕೆ ಮಾಡಿದ್ದಾರೆ. ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ. ತಾವು ಕಷ್ಟಪಟ್ಟು ಹೂಡಿಕೆ ಮಾಡಿದ ಅಸಲು ಸಿಗದೆ, ಕೆಲಸ ಮಾಡಿದ ಕೂಲಿಯೂ ಮಹಿಳೆಯರು ಬೀದಿಗೆ ಬಿದ್ದಿದ್ದಾರೆ.
ಹಣ ಕಳೆದುಕೊಂಡ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣ ಆ ವಂಚಕರನ್ನು ಬಂಧಿಸಿ ನ್ಯಾಯ ಒದಗಿಸಬೇಕು ಮತ್ತು ಹಣ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.
ಸರ್ಕಾರಿ ಉದ್ಯೋಗದ ಭರವಸೆ ನೀಡಿ ವಂಚಿಸಿದ ತಂದೆ, ಮಗಳು ಅರೆಸ್ಟ್
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ನಂಬಿಸಿ 40ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ 5.30 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ತಂದೆ-ಮಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಎಂ.ಎ. ಮನ್ಸೂರ್ ಅಹ್ಮದ್ ಹಾಗೂ ಮಗಳು ಶಂಶಾದ್ ಬೇಗಂ ಎಂ.ಎಂ. ಬಂಧಿತರು. ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕವಿದ್ದು, ಅವರ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರನ್ನು ನಂಬಿಸಿ ಹಣ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಆರೋಪಿಗಳು, ನಕಲಿ ನೇಮಕ ಆದೇಶಗಳನ್ನು ನೀಡಿ, ಬೆಂಗಳೂರು, ಮುಂಬೈ ಮತ್ತು ಕೊಲ್ಕತ್ತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ವಂಚನೆ ಜಾಲವನ್ನು ಹೊಂದಿದ್ದರು.
2025ರ ನವೆಂಬರ್ 17ರಂದು ವಿಜಯಪುರ ಜಿಲ್ಲೆಯ ನಿವಾಸಿ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಜೂನ್ 4ರಂದು ಆರೋಪಿಗಳನ್ನು ಬಂಧಿಸಿದೆ.


