ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯಲ್ಲಿ ಆಝಾನ್ ಕೂಗುತ್ತಿರುವಾಗಲೇ ಬಂಟ್ವಾಳದ ಧರ್ಮಗುರು ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ ನೂಜಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಲತೀಫ್ ಮದನಿ (50) ಮೃತಪಟ್ಟವರು.
ಸಂಜೆ ನಾಲ್ಕು ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಬಾಂಗ್ ಕೂಗುತ್ತಿದ್ದರು. ಅವರಿಗೆ ಹೃದಯಾಘಾತವಾಗಿ ಮೈಕ್ ಮುಂದೆ ಸ್ಥಳದಲ್ಲೇ ಕುಸಿದು ಅಸು ನೀಗಿದ್ದಾರೆ. ಮೃತ ಅಬ್ದುಲ್ ಲತೀಫ್ ಮದನಿ ಕಳೆದ ಒಂದು ವರ್ಷದಿಂದ ಈ ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದರು.
ಈ ದೃಶ್ಯಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಬ್ದುಲ್ ಲತೀಫ್ ಮದನಿ ನಿಧನಕ್ಕೆ ಮುಹಿದ್ದೀನ್ ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಪೊಲೀಸ್ ಪರೀಕ್ಷಾ ಕೇಂದ್ರದ ಹೊರಗೆ ವ್ಯಕ್ತಿಯ ಹತ್ಯೆ
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಪೊಲೀಸ್ ನೇಮಕಾತಿ ಪರೀಕ್ಷಾ ಕೇಂದ್ರದ ಹೊರಗೆ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಶಾಮ್ಲಿ ಜಿಲ್ಲೆಯ ನಿವಾಸಿ ಆಕಾಂಕ್ಷಾ ಪರೀಕ್ಷೆಗೆ ಹಾಜರಾಗಲು ರಾಂಪುರ ಮಣಿಹರನ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಚಾರ್ ಇಂಟರ್ ಕಾಲೇಜಿಗೆ ಆಗಮಿಸಿದ್ದರು. ಪತಿ ಶಿವಕುಮಾರ್ ಪರೀಕ್ಷಾ ಕೇಂದ್ರದ ಹೊರಗೆ ಕಾಯುತ್ತಿದ್ದಾಗ, ಆಕಾಂಕ್ಷಾಳ ಸಹೋದರ ಮಂಜೀತ್ ಎಂಬಾತ ಶಿವಕುಮಾರ್ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸರು ಧಾವಿಸಿ, ಶಿವಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರೊಳಗೆ ಅವರ ಪ್ರಾಣ ಹೋಗಿತ್ತು.
ಆಕಾಂಕ್ಷಾ ಮತ್ತು ಶಿವಕುಮಾರ್ ನಾಲ್ಕು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದರು. ಈ ಮದುವೆಗೆ ಆಕೆಯ ಕುಟುಂಬದವರ ತೀವ್ರ ವಿರೋಧವಿತ್ತು. ಇದೇ ಕೋಪದಲ್ಲಿ ಸಹೋದರ ಈ ಕೃತ್ಯ ಎಸಗಿದ್ದಾನೆ ಎಂದು ಆಕೆ ದೂರು ನೀಡಿದ್ದಾರೆ. ಮೃತರ ಸಹೋದರ ಶಿವಂ ಕುಮಾರ್ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.


