Menu

ಬ್ರ್ಯಾಂಡ್‌ ಬೆಂಗಳೂರು ಅಲ್ಲ, ಬ್ರೋಕನ್ ಬೆಂಗಳೂರು: ಆರ್‌ ಅಶೋಕ

R Ashoka

‘ಬ್ರ್ಯಾಂಡ್ ಬೆಂಗಳೂರು’ ಅಲ್ಲ, ಇದು ಡಿಕೆಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್‌ಬಂದಿಯ ಬ್ರೋಕನ್ ಬೆಂಗಳೂರು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ ಬಿದ್ದಿರುವ 5,000ಕ್ಕೂ ಅಧಿಕ ಮೃತ್ಯುಕೂಪಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಲ್ಲೆಲ್ಲಾ ನಾರುತ್ತಿರುವ ಕಸದ ರಾಶಿ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ @DKShivakumar ಅವರೇ, ಇಲಾಖೆಗಳ ಹಂಚಿಕೆಯ ಜಿದ್ದಾಜಿದ್ದಿನಲ್ಲಿ ಕೊನೆಗೂ ಒಲ್ಲದ ಮನಸ್ಸಿನಿಂದ ಸಚಿವ @krishnabgowda ಅವರಿಗೆ ಬೆಂಗಳೂರಿನ ಜವಾಬ್ದಾರಿ ಕಟ್ಟಿದ್ದೀರಿ. ಆದರೆ ಕಂದಾಯ ಇಲಾಖೆಯನ್ನು ಬಿಡಲು ಮನಸಿಲ್ಲದ ಸಚಿವ ಕೃಷ್ಣ ಭರೇಗೌಡ ಅವರಿಗೆ ಬೆಂಗಳೂರಿನ ನಗರದ ಜನರ ಜೀವಕ್ಕಿಂತ, BDA, BMRDA ಇಲ್ಲದ “ನೀರಸ” ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲಿನ ಅಸಮಾಧಾನವೇ ದೊಡ್ಡದಾದಂತಿದೆ ಎಂದಿದ್ದಾರೆ.

ಮಳೆಗಾಲ ಶುರುವಾದರೂ ಕೇವಲ 20% ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ 80% ಕಾಮಗಾರಿ ಇನ್ನೂ ನೆನೆಗುದಿಗೆ ಬಿದ್ದಿದೆ! ಬೈಕ್ ಸವಾರರು ರಸ್ತೆಗೆ ಇಳಿದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಈ ಗುಂಡಿಗಳಿಗೆ ಬೀಳುವ ಬಡವರ ಜೀವಕ್ಕೆ ಯಾರು ಹೊಣೆ? ನಾರುತ್ತಿರುವ ನಗರ:ಕಂಡ ಕಂಡಲ್ಲಿ ಕಸದ ರಾಶಿ ಬಿದ್ದಿದೆ, ವಿಲೇವಾರಿ ಮಾಡಲು GBAಗೆ ಯೋಗ್ಯತೆಯಿಲ್ಲ. ಮಳೆ ನೀರಿಗೆ ಈ ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸ್ವಚ್ಛಗೊಳಿಸಬೇಕಾದ ಸಿಬ್ಬಂದಿಯೇ ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದರೂ ಇಲಾಖೆ ಕುರುಡಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ವಿಟ್ಟಸಂದ್ರದಲ್ಲಿ ಕಸದ ಯಾತನೆ:ಯಾವುದೇ ಮುಂಜಾಗ್ರತೆಯಿಲ್ಲದೆ ವಿಟ್ಟಸಂದ್ರದಲ್ಲಿ ಕಸ ವರ್ಗಾವಣೆ ಕೇಂದ್ರ ಸ್ಥಾಪಿಸಲು ಮುಂದಾಗಿ ಸ್ಥಳೀಯ ಜನರನ್ನು ನರಕಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿಗಳೇ, ಬೆಂಗಳೂರಿಗೆ ₹2,000 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದೀರಲ್ಲ, ಆ ಸಾವಿರಾರು ಕೋಟಿ ಹಣ ಯಾರ ಜೇಬು ಸೇರಿದೆ? ರಸ್ತೆಗಳೇಕೆ ಇನ್ನೂ ಮೃತ್ಯು ಕೂಪಗಳಾಗೋಯೇ ಉಳಿದಿವೆ?,  ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೇ.. ನಿಮಗೆ ಇಷ್ಟವಿಲ್ಲದಿದ್ದರೆ ಖಾತೆ ಬಿಟ್ಟು ರಾಜೀನಾಮೆ ಕೊಡಿ, ಅದನ್ನು ಬಿಟ್ಟು ಬೆಂಗಳೂರಿನ 1.5 ಕೋಟಿ ನಾಗರಿಕರನ್ನು ನಿಮ್ಮ ಅಸಮಾಧಾನಕ್ಕೆ ಬಲಿ ಕೊಡಬೇಡಿ. ಅಧಿಕಾರ ಸಿಕ್ಕ ತಕ್ಷಣ ಬರೀ ಕಮಿಷನ್ ದಂಧೆ, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಈ ಸರ್ಕಾರಕ್ಕೆ ಬೆಂಗಳೂರಿನ ಬ್ರಾಂಡ್ ಇಮೇಜ್ ಸಂಪೂರ್ಣವಾಗಿ ಮಣ್ಣುಪಾಲು ಮಾಡಲು ಹೊರಟಿದೆ. ತಕ್ಷಣವೇ ಯುದ್ಧೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಕಸದ ಸಮಸ್ಯೆಯನ್ನು ಬಗೆಹರಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *