Menu

5% ಬಡ್ಡಿಯ ಆಮಿಷ, ಕೋಟ್ಯಂತರ ರೂ.ವಂಚನೆ: ಆದಿತ್ಯರಾಜ್‌ ಕ್ಯಾಪಿಟಲ್ ಮೇಲೆ ಪೊಲೀಸ್‌ ದಾಳಿ

ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ,  ಬೆಳಗಾವಿಯ ಭಾಗ್ಯನಗರದಲ್ಲಿರುವ ‘ಆದಿತ್ಯರಾಜ್‌ ಕ್ಯಾಪಿಟಲ್ ಸಂಸ್ಥೆಯ ಕಚೇರಿಯ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡ  ದಾಳಿ ನಡೆಸಿದೆ.

ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಅವರ ನೇತೃತ್ವದ ಅಧಿಕಾರಿಗಳ ತಂಡವು  ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗ್ಯನಗರದ 5ನೇ ಕ್ರಾಸ್‌ನಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಗೆ ಧಾವಿಸಿ  ಕಚೇರಿಯಲ್ಲಿದ್ದ ಪ್ರಮುಖ ಕಾಗದ ಪತ್ರಗಳು, ಬ್ಯಾಂಕ್ ಖಾತೆಗಳು ಹಾಗೂ ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ಗಳನ್ನು ವಶಪಡಿಸಿಕೊಂಡು  ತನಿಖೆ ಕೈಗೊಂಡಿದೆ.

ಬೆಳಗಾವಿಯ ನಾನಾವಡಿ ನಿವಾಸಿಯಾಗಿರುವ ಬಾಲರಾಜ್ ಮಾಣಿ ಆದಿತ್ಯರಾಜ್‌ ಕ್ಯಾಪಿಟಲ್ ಸಂಸ್ಥೆಯ ಮಾಲೀಕ.  ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ 100 ರೂಪಾಯಿಗೆ ತಿಂಗಳಿಗೆ 5 ರೂಪಾಯಿ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಆಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ ನೂರಾರು ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದರು.

ಸಾರ್ವಜನಿಕರಿಂದ ನಿಯಮಬಾಹಿರವಾಗಿ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿದ್ದ ಸಂಸ್ಥೆಯು ಆ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸದೆ ಬೇರೆಡೆ ಹೂಡಿಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ  ಕುರಿತು ವಂಚನೆಗೊಳಗಾದ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಜರುಗಿಸಲಾಗಿದೆ.

ಕಳೆದ ತಿಂಗಳಷ್ಟೇ ಶಿವಾನಂದ ನೀಲಣ್ಣವರ ಒಡೆತನದ ಶಿವಾನಂದ ಅಸೋಸಿಯೇಟ್ಸ್  ಎಂಬ ಕಂಪನಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ವಂಚನೆ ಪತ್ತೆ ಹಚ್ಚಿದ್ದರು.  ಆ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಐಡಿ ತನಿಖೆಗೆ ಒಳಪಡಿಸಲಾಗಿದೆ.

ಮೂಲಗಳ ಪ್ರಕಾರ, ಬೆಳಗಾವಿ ಜಿಲ್ಲಾದ್ಯಂತ  7 ರಿಂದ 8 ಅಕ್ರಮ ಹಣಕಾಸು ಕಂಪನಿಗಳು ಸಾರ್ವಜನಿಕರಿಗೆ ಅಧಿಕ ಬಡ್ಡಿಯ ಆಮಿಷವೊಡ್ಡಿ ಹಣ ಲೂಟಿ ಮಾಡುತ್ತಿವೆ. ಇಂತಹ ಲೇವಾದೇವಿ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮುಗ್ಧ ಜನಸಾಮಾನ್ಯರ ಕಷ್ಟದ ದುಡಿಮೆಯ ಹಣವನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *