ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಸರಿಯುವ ನಿಲುವು ಈಗ , ಪಕ್ಷದ ರಾಜಕೀಯ ಪಡಸಾಲೆಯಲ್ಲಿ ಮಾತ್ರವಲ್ಲ . ರಾಜ್ಯದಲ್ಲಿ ಪಕ್ಷದ ಹೊರಗೂ ಚರ್ಚೆಗೆ ಗ್ರಾಸವಾದ ಸಂಗತಿ. ಅಂಬೇಡ್ಕರ್, ಸಮಾಜವಾದದ ಮೂಲಕ ತಾನೊಬ್ಬ ಯಶಸ್ವಿ ನಾಯಕನಾಗಿ ಬೆಳೆಯಲು ಜನತಾ ಪರಿವಾರದಲ್ಲಿ ಸಾಧ್ಯವಿಲ್ಲ ಎಂಬ ಕಟು ರಾಜಕೀಯ ಸತ್ಯವನ್ನು ಮನಗಂಡ ನಂತರವೇ ಸಿದ್ದರಾಮಯ್ಯ ೨೦ ವರ್ಷಗಳ ಹಿಂದೆ ಕಾಂಗ್ರೆಸ್ ಮನೆಯ ಬಾಗಿಲು ತಟ್ಟಿದ್ದು. ಸಾಮಾಜಿಕ ಮೌಲ್ಯಗಳ ಅನುಷ್ಠಾನದ ಕಡೆ ಹೃದಯಪೂರ್ವಕ ಕಳಕಳಿ ಮತ್ತು ಬದ್ದತೆಯಿರುವ ಓರ್ವ ನಾಯಕನೆಂದೂ ರಾಜ್ಯ- ರಾಷ್ಟ್ರ ರಾಜಕಾರಣದ ಗೊಂದಲ- ಗೋಜಲುಗಳಿಗೆ ಸಿಲುಕುವುದಿಲ್ಲ.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಸರಿಯುವ ನಿಲುವು ಈಗ , ಪಕ್ಷದ ರಾಜಕೀಯ ಪಡಸಾಲೆಯಲ್ಲಿ ಮಾತ್ರವಲ್ಲ . ರಾಜ್ಯದಲ್ಲಿ ಪಕ್ಷದ ಹೊರಗೂ ಚರ್ಚೆಗೆ ಗ್ರಾಸವಾದ ಸಂಗತಿ. ಐವತ್ತು ಮತ್ತು ಅರವತ್ತರ ದಶಕದಲ್ಲಿ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಎಪ್ಪತ್ತರ ದಶಕದಲ್ಲಿ ವಿರೇಂದ್ರ ಪಾಟೀಲ್ ,ಎಂಬತ್ತರ ದಶಕದಲ್ಲಿ ಬಂಗಾರಪ್ಪ- ಇವೆರಲ್ಲರೂ ರಾಜ್ಯದ ಮುಖ್ಯಮಂತ್ರಿಗಳಾಗಿ ತರವಾಯ ದಿಲ್ಲಿ ರಾಜಕಾರಣದತ್ತ ಮುಖ ಮಾಡಿದವರೇ. ಬ್ರಹ್ಮಾನಂದರೆಡ್ಡಿ , ಪಿ. ವಿ. ನರಸಿಂಹರಾವ್, ವಿಜಯಭಾಸ್ಕರರೆಡ್ಡಿ ಚನ್ನಾರೆಡ್ಡಿ ಇವರೆಲ್ಲರೂ ಅವಿಭಜಿತ ಆಂಧ್ರದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಬಳಿಕ ದಿಲ್ಲಿ ರಾಜಕಾರಣದ ಕಾಂಗ್ರೆಸ್ ಬಂಡಿಯ ನೊಗ ಹೊತ್ತವರೇ. ಕರುಣಾಕರನ್ ಹಾಗೂ ಎ ಕೆ ಅಂಟನಿ, ಕೇರಳದ ರಾಜಕೀಯದಲ್ಲಿ ಸಾಕಷ್ಟು ತಮ್ಮನ್ನು ತೊಡಗಿಸಿಕೊಂಡ ಬಳಿಕ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅವರ ಜೊತೆಗೂಡಿ ಪಕ್ಷವನ್ನು ಬಲಪಡಿಸಿದವರು.
ಹೌದು. ಸಿದ್ದರಾಮಯ್ಯ ಮೂಲ ಕಾಂಗ್ರೆಸ್ ವಾಸಿಯಲ್ಲ. ಆದರೆ ಅವರು ಜನತಾ ಪರಿವಾರವನ್ನು ತೊರೆದು ಕಾಂಗ್ರೆಸ್ ಸೇರಿ ಎರಡು ದಶಕಗಳೇ ಉರುಳಿದೆ. ಮಿಗಿಲಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ್ದು ಆಗಿದೆ. ಆದರೆ ಈಗ ಹೈಕಮಾಂಡ್ ಬಯಸುತ್ತಿರುವುದು ಸಿದ್ದರಾಮಯ್ಯ ಅಂತಹ ನಾಯಕನೊಬ್ಬ ದಿಲ್ಲಿ ಸಭೆಗೆ ಬರಬೇಕೆಂಬುದು. ಈ ದಿಶೆಯಲ್ಲಿ ಸಿದ್ದರಾಮಯ್ಯ ದಿಲ್ಲಿ ರಾಜಕಾರಣದತ್ತ ಮುಖ ಮಾಡಿದ ಕೂಡಲೇ ಇವರಿಗೆ ರಾಜ್ಯ ರಾಜಕೀಯದಲ್ಲಿರುವ ನಂಟು ಮಂಕಾಗುವುದೆಂಬ ಅಪನಂಬಿಕೆ ಸಲ್ಲದು. ರಾಜಕಾರಣದಲ್ಲಿ ನಿವೃತ್ತಿ ಎಂಬುದಿಲ್ಲ. ಹಾಗೆಯೇ ಇದು ಅನುಕೂಲ ಸಿಂಧು ಎಂಬುದೂ ಆಗಬಾರದು. ಓರ್ವ ನಾಯಕ ಯಶಸ್ವಿಯಾಗಿ ಸಿಎಂ ಹುದ್ದೆಯನ್ನು ನಿರ್ವಹಿಸಿದ ಬಳಿಕ, ತಾನು ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತಿದ್ದೇನೆ ಎಂಬ ಭಾವನೆ ಸಲ್ಲದು. ಒಂದು ವೇಳೆ ಹಾಗಿದಿದ್ದರೆ. ಈ ದೇಶದ ಪ್ರಧಾನಿಯಾದ ನರಸಿಂಹರಾವ್, ರಕ್ಷಣಾ, ಕೃಷಿ ಮಂತ್ರಿಯಾಗಿದ್ದ ಶರತ್ ಪವಾರ್ ಅಂತಹ ಅನುಭವಿ ನಾಯಕರು ಆಂಧ್ರಪ್ರದೇಶ- ಮಹಾರಾಷ್ಟ್ರದ ಗಡಿ ದಾಟುತ್ತಿರಲಿಲ್ಲ.
ಸಿದ್ದರಾಮಯ್ಯ ೨೦೦೬ ರಿಂದ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಮತ್ತು ಅವರೂ ಪಕ್ಷದ ಆಸರೆಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಪಕ್ಷವು ಬೆಳೆಯುತ್ತಿದ್ದಂತೆ ಆ ಪಕ್ಷಕ್ಕಾಗಿ ದುಡಿದ ನಾಯಕನ ಬೆಳವಣಿಗೆ ನಾವು ಕಾಣಬಹುದು. ಇಪ್ಪತ್ತು ವರ್ಷಗಳ ಹಿಂದೆ ತಾವು ನಂಬಿದ ಅಂಬೇಡ್ಕರ್, ಸಮಾಜವಾದದ ಮೂಲಕ ತಾನೊಬ್ಬ ಯಶಸ್ಚಿ ನಾಯಕನಾಗಿ ಬೆಳೆಯಲು ಜನತಾ ಪರಿವಾರದಲ್ಲಿ ಸಾಧ್ಯವಿಲ್ಲ ಎಂಬ ಕಟು ರಾಜಕೀಯ ಸತ್ಯವನ್ನು ಮನಗಂಡ ನಂತರವೇ ಸಿದ್ದರಾಮಯ್ಯ ಕಾಂಗ್ರೆಸ್ ಮನೆಯ ಬಾಗಿಲು ತಟ್ಟಿದ್ದು. ಸಾಮಾಜಿಕ ಮೌಲ್ಯಗಳ ಅನುಷ್ಟಾನದ ಕಡೆ ಹೃದಯಪೂರ್ವಕ ಕಳಕಳಿ ಮತ್ತು ಬದ್ದತೆ ಇರುವಂತಹ ನಾಯಕರೆಂದೂ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ತಾರತಮ್ಯದ ಗೊಂದಲ -ಗೋಜಲುಗಳಿಗೆ ಸಿಲುಕುವುದಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರೀಗ ದೇಶ ರಾಜಕಾರಣದತ್ತ ಮುಖ ಮಾಡುವುದರಿಂದ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುವುದರಲ್ಲಿ ಸಂದೇಹವಿಲ್ಲ.


