ತುರುವೇಕೆರೆ ತಾಲೂಕಿನ ಅಂಚಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯವನ್ನು ನಾಲ್ಕು ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ವಿವಾಹಿತ ಮಹಿಳೆಯ ಪ್ರಿಯಕರ ಆಕೆ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದಾಳೆಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಬಯಲಾಗಿದೆ.
ವಿವಾಹಿತೆ ಶ್ವೇತಾ ಎಂಬಾಕೆ ಪ್ರಿಯತಮ ಭಾನುಪ್ರಕಾಶ್‌ನಿಂದ ಕೊಲೆಯಾದವಳು. ಅಕ್ರಮ ಸಂಬಂಧ ಸಂಬಂಧ ಹೊಂದಿದ್ದ ಪ್ರಿಯಕರ ಭಾನುಪ್ರಕಾಶ್ ಕೊಲೆ ಮಾಡಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಆರೋಪಿಯನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ. ತುರುವೇಕೆರೆ ತಾಲೂಕಿನ ಅಂಚಿಹಳ್ಳಿ ಅರಣ್ಯ ಪ್ರದೇಶದಲ್ಲಿ ಜನವರಿ 30ರಂದು ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಶ್ವೇತಾ ನಾಪತ್ತೆ ಎಂದು ಗಂಡ ಜನವರಿ 28 ರಂದು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಆಕೆಯ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಿ ಪತ್ತೆಯಾಗಿರುವ ಶವ ಶ್ವೇತಾಳದ್ದು ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.
ಮುತ್ತಗದಹಳ್ಳಿಯ ಶ್ವೇತಾಗೆ ಅದೇ ಗ್ರಾಮದ ಭಾನುಪ್ರಕಾಶ್ ಜೊತೆ ಅಕ್ರಮ ಸಂಬಂಧ ಇತ್ತು. ಬಳಿಕ ಇಬ್ಬರ ನಡುವೆ ಮನಸ್ತಾಪ ಆಗಿತ್ತು. ಜನವರಿ 19ರಂದು ಭಾನುಪ್ರಕಾಶ್ ಶ್ವೇತಾಗೆ ಕಾಲ್ ಮಾಡಿ ಆದಿಚುಂಚನಗಿರಿಗೆ ಕರೆಸಿಕೊಂಡು ಅರಣ್ಯಪ್ರದೇಶದಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ.
ಶ್ವೇತಾಳ ಮೊಬೈಲ್ ನಂಬರ್ ಸಿಡಿಆರ್ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಭಾನುಪ್ರಕಾಶ್ ಮೇಲೆ ಅನುಮಾನ ವ್ಯಕ್ತವಾಗಿದೆ. ಭಾನುಪ್ರಕಾಶ್‌ನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಬೇರೆಯವರ ಜೊತೆ ಆಕೆ ಸಂಬಂಧ ಬೆಳೆಸುತ್ತಿದ್ದಳು ಎಂದು ಭಾನುಪ್ರಕಾಶ್ ಕೊಲೆ ಮಾಡಿದ್ದ. ಭಾನುಪ್ರಕಾಶ್-ಶ್ವೇತಾ 2-3 ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದರು. ಭಾನುಪ್ರಕಾಶ್ ಪತ್ನಿಗೆ ವಿಚಾರ ಗೊತ್ತಾಗಿ ಮನೆಯಲ್ಲಿ ಗಲಾಟೆ ಆಗಿತ್ತು. ಹೀಗಾಗಿ ಕೆಲವು ದಿನಗಳಿಂದ ಭಾನುಪ್ರಕಾಶ್ ಶ್ವೇತಾಳ ಜೊತೆ ಮಾತು ಬಿಟ್ಟಿದ್ದ. ಆ ಸಮಯದಲ್ಲಿ ಶ್ವೇತಾ ಮತ್ತೊಬ್ಬನ ಜೊತೆ ಸಂಬಂಧ ಬೆಳೆಸಿದ್ದಳು. ವಿಚಾರ ತಿಳಿದು ಶ್ವೇತಾಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.


