Menu

ತ್ವರಿತ ಮತದಾರರ ಪಟ್ಟಿ ಪರಿಶೀಲನೆ ಕಾಡುವ ಗುಮ್ಮ

ಪಶ್ಚಿಮ ಬಂಗಾಲದಲ್ಲಿ ಮಮತಾ ನೆಲಕಚ್ಚಿದ ಮೇಲೆ ಎಲ್ಲ ಪ್ರತಿಪಕ್ಷಗಳಿಗೆ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಕೇರಳದಲ್ಲಿ ಕೈ ಅಧಿಕಾರಕ್ಕೆ ಬಂದಿದ್ದು ಸ್ವಲ್ಪ ಭರವಸೆ ಮುಡಿಸಿದೆ. ಈಗ ಕರ್ನಾಟಕದ ಕಾಂಗ್ರೆಸ್ ನಾಯಕರು ಕೇರಳದಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸಿದ ಕ್ರಮವನ್ನೇ ಇಲ್ಲೂ ಅನುಸರಿಸಲು ಸೂಚಿಸಿದ್ದಾರೆ. ಮತ್ತೆ ಕೆಲವರು ರಾಜ್ಯ ಸರ್ಕಾರ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ನೀಡಲು ಸೂಚಿಸಿದ್ದಾರೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ.

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತನ್ನ ನಿಯಮಗಳನ್ನು ಅನ್ವಯಿಸಬಹುದು. ಕೇಂದ್ರ ಚುನಾವಣೆ ಆಯೋಗದ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸರಿಗೆ ಯಾವ ಅಧಿಕಾರವೂ ಇರಲಿಲ್ಲ. ಅವರು ಚುನಾವಣೆ ಆಯೋಗ ಹೇಳಿದಂತೆ ಕೇಳುವುದು ಅನಿವಾರ್ಯವಾಗಿತ್ತು. ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಚುನಾವಣೆ ಆಯೋಗಕ್ಕೆ ಮಾತ್ರ ಅಧಿಕಾರವಿದೆ. ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಆಯೋಗಕ್ಕೆ ಸಂಪೂರ್ಣ ಅಧಿಕಾರ ಬಂದು ಬಿಡುತ್ತದೆ. ಸೇನೆಯನ್ನೂ ಕೂಡ ಚುನಾವಣೆಗೆ ಬಳಸಿಕೊಳ್ಳಬಹುದು. ಹೀಗಿರುವಾಗ ರಾಜ್ಯ ಸರ್ಕಾರ್ ನೀಡುವ ಸ್ವಾರ್ಟ್ ಕಾರ್ಡ್‌ಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ.

ಅದರ ಬದಲು ಪ್ರತಿ ಮತದಾರ ತನ್ನ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸಿ ತನ್ನ ಮತದಾನದ ಹಕ್ಕು ಉಳಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಬಹುದು. ಆಗ ಮತದಾರರ ಹೆಸರು ಬಿಟ್ಟು ಹೋಗುವುದು ತಪ್ಪಲಿದೆ. ಅಲ್ಲದೆ ಈಗ ಮತದಾರರ ಪಟ್ಟಿಯಲ್ಲಿ ಇಲ್ಲದವರಿಗೆ ಗೃಹ ಜ್ಯೋತಿ ಸೇರಿದಂತೆ ಎಲ್ಲ ಗ್ಯಾರಂಟಿಗಳು ಖೋತಾ ಆಗಲಿದೆ ಎಂಬ ಭೀತಿ ಆರಂಭಗೊಂಡಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಭವಿಷ್ಯ ಅಂಧಕಾರದಲ್ಲಿ ಮುಳುಗಲಿದೆ.

ಯಾವುದೇ ಕಾನೂನು ಆದರೂ ಕೊನೆಗೆ ಜನ ದೂಷಿಸುವುದು ರಾಜ್ಯ ಸರ್ಕಾರವನ್ನೇ ಹೊರತು ಬೇರೆ ಪಕ್ಷವನ್ನಲ್ಲ. ಇದು ಈಗ ಕಾಂಗ್ರೆಸ್ ನಾಯಕರಿಗೆ ನುಂಗಲಾಗದ ತುತ್ತಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರ ಕೇಂದ್ರ ಚುನಾವಣೆ ಆಯೋಗಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪರಿಷ್ಕರಣೆ ಕೆಲಸ ಮಾತ್ರ ವಸ್ತುನಿಷ್ಠವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಬಂದು ವಾದ ಮಾಡಿದರೂ ಆಯೋಗವನ್ನು ಮಣಿಸಲು ಸಾಧ್ಯವಾಗಲಿಲ್ಲ.

ಈಗ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಲು ಬರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಅಡಕತ್ತರಿಯಲ್ಲಿ ಸಿಲುಕಿದೆ. ಕೇಂದ್ರ ಚುನಾವಣೆ ಆಯೋಗ ಮುಂದಿನ ತಿಂಗಳು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಬಹಳ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ತೀರ್ಮಾನಿಸಿದೆ.ಕೈಗೆ ತನ್ನ ಮತಬ್ಯಾಂಕ್‌ಗೆ ಕನ್ನ ಬೀಳಬಹುದು ಎಂಬ ಅವ್ಯಕ್ತ ಭಯ ಕಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನೆಲಕಚ್ಚಿವೆ.ಅಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಯಾವ ರಾಜಕೀಯ ಪಕ್ಷವೂ ಚಕಾರ ಎತ್ತಿಲ್ಲ. ಜೋಸಫ್ ವಿಜಯನ್ ಜಯಗಳಿಸಿರುವುದು ಎಲ್ಲರ ಲೆಕ್ಕಾಚಾರವನ್ನು ದಿಕ್ಕುತಪ್ಪಿಸಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಪರಿಣಾಮ ಕಂಡು ಬರುತ್ತಿರುವುದರಿಂದ ರಾಜಕೀಯ ಪಕ್ಷಗಳು ಈಗ ಈ ವಿಷಯದಲ್ಲಿ ದಿಕ್ಕು ಕಾಣದ ಸ್ಥಿತಿಯಲ್ಲಿದೆ. ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಬಂದಿದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಪ್ರಾರ್ಥಿಸುವ ಹಂತವನ್ನು ರಾಜಕೀಯ ಪಕ್ಷಗಳು ತಲುಪಿವೆ.

Related Posts

Leave a Reply

Your email address will not be published. Required fields are marked *