ಮೊದಲು ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆಗೆ ಆಹ್ವಾನ ಕೊಟ್ಟಿದ್ದು ಅವರು. ಅದಕ್ಕೆ ನಾನು ಸಿದ್ಧ ಎಂದು ಹೇಳಿದ್ದೇನೆ. ಪಾಪ ಅವರು ತುಂಬಾ ಬ್ಯುಸಿ ಇದ್ದಾರೆ. ದಿನವೂ ಇಷ್ಟು ಅಂತ ವಸೂಲಿ ಆಗಲೇಬೇಕು ಅಂತ ಬ್ಯುಸಿ ಇದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಬಿಡದಿ ಟೌನ್ ಶಿಪ್ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ಶಿವಕುಮಾರ್ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಹೀಗೆ ಉತ್ತರಿಸಿದರು.
ಮೀಟರ್ ಲೆಕ್ಕ ಹಾಕೋದು, ರೇಟ್ ಫಿಕ್ಸ್ ಮಾಡೋದು ಅವರ ಕೆಲಸ. ಆ ಬ್ಯುಸಿನಲ್ಲಿ ನಾನಿಲ್ಲ. ದಿನವು ಅರ್ಧ ರಾತ್ರಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲವೇ, ದಿನಕ್ಕೆ ಇಷ್ಟು ವಸೂಲಿ ಆಗಬೇಕೆಂದು ಫಿಕ್ಸ್ ಮಾಡಿಕೊಂಡು ಜೀವನ ಮಾಡುವವರು ಅವರು. ಹೀಗಾಗಿ ಅವರು ಒಂದೊಂದು ಸೆಕೆಂಡ್ ಗೂ ಬ್ಯುಸಿ ಇರುತ್ತಾರೆ. ಜನಗಳ ಮುಂದೆ ಚರ್ಚೆ ಮಾಡುವುದಕ್ಕೆ ನನ್ನದು ಯಾವುದೇ ಅಭ್ಯಂತರ ಇಲ್ಲ ಕೇಂದ್ರದಲ್ಲಿ ನನ್ನದು ಸಣ್ಣ ಇಲಾಖೆ. ನಾನೇನು ಅಲ್ಲಿ ಕ್ರಾಂತಿ ಮಾಡುವುದು ಬೇಕಿಲ್ಲ. ಕ್ರಾಂತಿ ಮಾಡುವವರು ಬಹಳ ಬ್ಯುಸಿ ಇದ್ದಾರೆ. ಅವರು ಬಂದರೆ ಬಿಡದಿಗೆ ಹೋಗಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಹಾಗೂ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೃಕೃತ್ಯ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಯಾವುದೋ ಒಂದು ವಿಷಯ ಇಟ್ಟುಕೊಂಡು ಸುದ್ದಿಯಲ್ಲಿರುವುದಕ್ಕೆ ಕಾಂಗ್ರೆಸ್ನವರು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಸ್ವಲ್ಪ ದಿನ ಮನರೇಗಾ ಬಗ್ಗೆ ಅವರು ಮಾತನಾಡಿದ್ದೆ ಮಾತನಾಡಿದ್ದು. ಈಗ ಎಸ್’ಐಆರ್ ಎಂದು ಹೊರಟಿದ್ದಾರೆ. ಇವರಿಗೆ ಜನ ಕೆಲಸ ಮಾಡಲು ಅವಕಾಶ ಕೊಟ್ಟರು. ಆದರೆ ಜನರ ಕೆಲಸ ಮಾಡುವ ಮನೋಭಾವ ಇವರಿಗಿಲ್ಲ. ಈ ವಿಷಯ ಎತ್ತಿಕೊಂಡು ಜನರನ್ನು ಡೈವರ್ಟ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಮುಂಗಡವಾಗಿ ಎರಡು ತಿಂಗಳ ಅಕ್ಕಿ ತೆಗೆದುಕೊಳ್ಳಿ ಎಂದು ಹೇಳಿದೆ ಎಂದು ಸ್ವತಃ ನೀವೇ ಮಾಧ್ಯಮದವರು ಹೇಳಿದ್ದೀರಿ. ಆದರೆ ಬಡವರ ಹಸಿವು ನೀಗಿಸೋದು ನಾವು ಎಂದು ಜಾಹೀರಾತು ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಅಕ್ಕಿ ಕೊಡುತ್ತಿದೆ. ಕೇಂದ್ರ ಕೊಡುತ್ತಿರುವ ಅಕ್ಕಿಯನ್ನು ಹಂಚಿ ಇವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ತುಮಕೂರಿನಲ್ಲಿ ಇತ್ತೀಚೆಗೆ ಸಮಾವೇಶ ಮಾಡಿದರು. ಆ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಯಾಕೆ ಹಾಕಿದ್ದಾರೆ, ಕೇಂದ್ರದಿಂದ ಕೊಡುವಂತಹ ಹಲವಾರು ಯೋಜನೆಗಳ ಸಮಾವೇಶ ಅದಾಗಿತ್ತು. ಅದಕ್ಕೆ ನನ್ನ ಹೆಸರನ್ನು ಹಾಕಿದ್ದರು. ಹಣ, ಅನುದಾನ, ಕಾರ್ಯಕ್ರಮ ಕೇಂದ್ರದ್ದು, ಬಿಟ್ಟಿ ಪ್ರಚಾರ ಇವರದ್ದು ಎಂದು ದೂರಿದರು.
ರಾಜ್ಯದ ಹಲವಾರು ಪ್ರದೇಶದಲ್ಲಿ ಮಳೆ, ಬಿರುಗಾಳಿಯಿಂದ ಬಾಳೆ, ತೆಂಗು ನಾಶ ಆಗಿದೆ. ಎಲ್ಲಾದರೂ ಒಂದು ಕಡೆ ಸರಕಾರದವರು ಹೋಗಿದ್ದಾರ, ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ ಕಾಂಗ್ರೆಸ್ಸಿನರು ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದಾರೆ. ಜನಕ್ಕಿಂತ ಇವರಿಗೆ ರಾಜಕೀಯವೇ ದೊಡ್ಡದಾಗಿದೆ ಎಂದು ಕುಮಾರಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ದೇವೇಗೌಡರು ಮತ್ತೆ ರಾಜ್ಯಸಭೆಗೆ ಆಯ್ಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಕುಮಾರಸ್ವಾಮಿ ಅವರು; ನಾವು ಯಾರನ್ನೂ ಮರು ಆಯ್ಕೆ ಬಗ್ಗೆ ಕೇಳಿಲ್ಲ. ನಮ್ಮ ಮಿತ್ರಪಕ್ಷಕ್ಕೆ ವಿಧಾನಸಭೆಯಲ್ಲಿ 63 ಸ್ಥಾನಗಳಿವೆ. ಹೀಗಾಗಿ ಬಿಜೆಪಿ ಅವರೇ ನಿರ್ಧರಿಸುತ್ತಾರೆ. ನಾನಾಗಲಿ,ದೇವೇಗೌಡರಾಗಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಚರ್ಚೆ ಮಾಡೋಕೂ ಹೋಗಿಲ್ಲ. ದೇವೇಗೌಡರ ಅವಶ್ಯಕತೆ ಬಗ್ಗೆ ದೆಹಲಿ ಮಟ್ಟದಲ್ಲಿ ತೀರ್ಮಾನ ಮಾಡಲಿ. ನಾವು ಇನ್ನೊಬ್ಬರಿಗೆ ತಪ್ಪಿಸಿ ನಮಗೆ ಕೊಡಿ ಎಂದು ಕೇಳಲ್ಲ ಎಂದರು.
ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆ ತಯಾರಿ ಕುರಿತಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಹೆಚ್.ಡಿ. ಕುಮಾರಸ್ವಾಮಿ ನಾಯಕರ ಸಭೆ ನಡೆಸಿದರು. ಮತಗಟ್ಟೆ ಹಾಗೂ ವಾರ್ಡುವಾರು ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಮುಖಂಡರಿಗೆ ಕಠಿಣ ಸೂಚನೆಗಳನ್ನು ಕೊಟ್ಟ ಸಚಿವರು, ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಗಡುವು ನೀಡಿದೆ. ಹೇಗಾದರೂ ಮಾಡಿ ಚುನಾವಣೆಯನ್ನು ಮುಂದಕ್ಕೆ ಹಾಕಿಕೊಂಡು ಹೋಗಬೇಕು ಎಂದುಕೊಂಡಿದ್ದ ಸರಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಬೆಂಗಳೂರು ಜನರ ಹಕ್ಕನ್ನು ಕಸಿಯುವ ದುಸ್ಸಾಹಸ ಮಾಡಿತು ಎಂದು ಹೇಳಿದರು.


