Menu

ಎಸ್ ಐಆರ್ ಮ್ಯಾಪಿಂಗ್‌ನಲ್ಲಿ 75 ಲಕ್ಷ ಮಂದಿಯನ್ನು ಹೊರಗಿಡಲಾಗಿದೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

ಬಿಜೆಪಿ ಹಾಗೂ ಚುನಾವಣಾ ಆಯೋಗದ  ಸಹಯೋಗದಲ್ಲಿ 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(ಎಸ್ ಐಆರ್) ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  ಆರೋಪಿಸಿದರು.

ರಾಜ್ಯದಲ್ಲಿ ಎಸ್ ಐಆರ್ ಗೆ ಮುನ್ನ ನಡೆದಿರುವ ಮ್ಯಾಪಿಂಗ್‌ನಲ್ಲಿ 75 ಲಕ್ಷ ಮಂದಿಯನ್ನು ಹೊರಗಿಡಲಾಗಿದೆ ಎಂದು  ಸುದ್ದಿಗೋಷ್ಠಿಯಲ್ಲಿ ದೂರಿದರು. ಜೂನ್ 20ರ ನಂತರ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ಅದಕ್ಕೂ ಮುನ್ನ ನಡೆದಿರುವ ಮ್ಯಾಪಿಂಗ್‌ನಲ್ಲಿ ಭಾರಿ ಸಂಚು ನಡೆದಿದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 28 ಲಕ್ಷ ಮತದಾರರ ಪೈಕಿ 3.5 ಲಕ್ಷ ಮತದಾರರನ್ನು ಮ್ಯಾಪಿಂಗ್‌ನಿಂದ ಹೊರಗಿಡಲಾಗಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 72 ಸಾವಿರ ಮತದಾರರನ್ನು, ನರಸಿಂಹರಾಜ ಕ್ಷೇತ್ರದಲ್ಲಿ 60 ಸಾವಿರ ಜನರನ್ನು ಹೊರಗಿಟ್ಟಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ತಸ್ವೀರ್ ಸೇರ್ ಗೆಲ್ಲುತ್ತಿದ್ದಾರೆ. ಹೊರಗಿಟ್ಟಿರುವ 60 ಸಾವಿರ ಪೈಕಿ 36 ಸಾವಿರ ಮುಸ್ಲಿಂ ಮತದಾರರು ಸೇರಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ 36 ಸಾವಿರ ಜನರನ್ನು ಹೊರಗಿಟ್ಟಿದ್ದಾರೆ. ಅದರಲ್ಲಿ 18 ಸಾವಿರ ಮುಸ್ಲಿಮರು. ಈ ಕ್ಷೇತ್ರದಲ್ಲಿ ಗೆಲುವಿನ ಅಂತರವೇ 4.5 ಸಾವಿರ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ 23 ಸಾವಿರ ಮತದಾರರನ್ನು ಹೊರಗಿಡಲಾಗಿದೆ. ನಾವು ಇದನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಸಮಕ್ಷಮದಲ್ಲಿ ಚರ್ಚಿಸಿದ್ದೇವೆ. ಸ್ವತಃ ಮುಖ್ಯಮಂತ್ರಿಯವರೇ ಚಿಂತೆಗೆ ಒಳಗಾಗಿದ್ದರು ಎಂದು ತಿಳಿಸಿದರು.

ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಮತ್ತೆ ಮಧ್ಯಾಹ್ನ ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆಗಲೂ ಅಧಿಕಾರಿಗಳು ಅದೇ ಉತ್ತರ ನೀಡುತ್ತಿದ್ದರು. “ಮ್ಯಾಪಿಂಗ್‌ನಿಂದ ಕೈಬಿಟ್ಟವರನ್ನು ಮತ್ತೆ ಸೇರಿಸುತ್ತೇವೆ” ಎಂದು ಸಬೂಬು ಹೇಳಿದ್ದಾರೆ. ಯಾರನ್ನು ಕೈಬಿಡಲಾಗಿದೆ ಎಂಬ ಪಟ್ಟಿ ಕೊಡಲು ಸಿದ್ಧರಿಲ್ಲ. ಮತಗಟ್ಟೆ ಅಧಿಕಾರಿಗಳ ಬಳಿಯೇ ಮಾಹಿತಿ ಪಡೆಯಬೇಕಾಗಿದೆ ಎಂದು ದೂರಿದರು.

ನಾವು ಸಾಫ್ಟ್‌ವೇ‌ರ್ ಬಳಸಿ ವಿಶ್ಲೇಷಣೆ ನಡೆಸಿದಾಗ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ಕೈಬಿಟ್ಟವರ ಪೈಕಿ ಶೇ.90ರಷ್ಟು ಜನ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯಗಳಿಗೆ ಸೇರಿದ ಕಾಂಗ್ರೆಸ್ ಮತದಾರರಾಗಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರಿರುವ 97 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಎಸ್‌ಐಆರ್‌ ನಡೆಸಲಾಗುತ್ತಿದೆ. ಮತಗಟ್ಟೆ ಏಜೆಂಟ್-1 ಆಗಿ ಸ್ಥಳೀಯ ಶಾಸಕರು ಅಥವಾ ಮಾಜಿ ಶಾಸಕರನ್ನು ರಾಜಕೀಯ ಪಕ್ಷಗಳು ನೇಮಿಸಬೇಕು. ಬೂತ್ ಮಟ್ಟದಲ್ಲಿ ಏಜೆಂಟ್-2 ಅನ್ನು ನೇಮಿಸಬೇಕಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 60 ಸಾವಿರ ಮತಗಟ್ಟೆಗಳಿವೆ. ಕಾಂಗ್ರೆಸ್‌ನಿಂದ ಕೇವಲ 28 ಸಾವಿರ ಏಜೆಂಟ್‌ಗಳ ಪಟ್ಟಿಗೆ ಮಾತ್ರ ಆಯೋಗ ಅನುಮತಿ ನೀಡಿದೆ. ಇನ್ನೂ 30 ಸಾವಿರ ಏಜೆಂಟ್-2 ಪಟ್ಟಿಗೆ ಅನುಮತಿ ನೀಡಿಲ್ಲ. ಬಿಎಲ್‌ಒಗಳ ಜೊತೆ ಬಿಎಲ್‌ಎಗಳು ಮನೆ ಮನೆಗೆ ತೆರಳಲು ಅವಕಾಶವಿದೆ. ಬಿಜೆಪಿ ಬೆಂಬಲಿತ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಉತ್ತಮ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬರ ಬಳಿಯೂ ಮತದಾರರ ಪಟ್ಟಿ ಇದೆ. ಯಾರು ಯಾವ ಪಕ್ಷದ ಮತದಾರರು ಎಂಬ ಮಾಹಿತಿ ಅವರ ಬಳಿ ಇದೆ.
ಬಿಎಲ್‌ಒಗಳ ಜೊತೆ ಸೇರಿ ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಸುಲಭವಾಗಿ ಕೈಬಿಡುತ್ತಿದ್ದಾರೆ. ಬಿಎಲ್‌ಒಗಳು ಕಾಂಗ್ರೆಸ್‌ ಏಜೆಂಟ್‌ಗಳನ್ನು ಜೊತೆ ಕರೆದುಕೊಂಡು ಹೋಗುತ್ತಿಲ್ಲ ಎಂದು ದೂರಿದರು.

Related Posts

Leave a Reply

Your email address will not be published. Required fields are marked *