ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಮರಳಿ 3% ಗೆ ಇಳಿಕೆ ಮಾಡಿ ಈ ಸಮುದಾಯಕ್ಕೆ ವಂಚನೆ ಮಾಡಿದೆ. ಇದರ ವಿರುದ್ಧ ಜನಾಂದೋಲನ ನಡೆಯಲಿದ್ದು, ಬಿಜೆಪಿ ಕೂಡ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಎಸ್ಸಿ ಮೀಸಲಾತಿಯನ್ನು 15% ರಿಂದ 17% ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು 3% ರಿಂದ 7% ಕ್ಕೆ ಏರಿಸಲಾಗಿತ್ತು. ಇದನ್ನು ಜನಸಂಖ್ಯಾ ಆಧಾರದಲ್ಲಿ ತೀರ್ಮಾನಿಸಲಾಗಿತ್ತು. ಇದರಿಂದಾಗಿ ನ್ಯಾಯಯುತವಾದ ಮೀಸಲಾತಿ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಹೆಸರಲ್ಲಿ ಷಡ್ಯಂತ್ರ ಮಾಡಿ ದಲಿತರ ಮೂಗಿಗೆ ತುಪ್ಪ ಸವರಿ ಮೀಸಲಾತಿ ಪ್ರಮಾಣವನ್ನು ಇಳಿಕೆ ಮಾಡಿದೆ. ಇಡೀ ದಲಿತ ಸಮುದಾಯಕ್ಕೆ ಕಾಂಗ್ರೆಸ್ ದ್ರೋಹ ಬಗೆದಿದೆ. ಅದರಲ್ಲೂ ಎಸ್ಟಿ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯವಾಗಿದ್ದು, ಮೀಸಲು ಪ್ರಮಾಣ ಮರಳಿ 3% ಗೆ ಬಂದಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಲಿತ ಪರವಾದ ನೀತಿಯೇ? ಎಂದು ಪ್ರಶ್ನೆ ಮಾಡಿದರು.
ಡಾ.ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಮೀಸಲಾತಿ ಪ್ರಮಾಣ ಏಕೆ ಹೆಚ್ಚಿಸಲಿಲ್ಲ? ಈ ಹೊಸ ಆದೇಶದಿಂದ ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗಿದ್ದು, ಇದಕ್ಕೆ ಸರ್ಕಾರ ಉತ್ತರ ಕೊಡಬೇಕಿದೆ. ಈ ಪ್ರಮಾಣವನ್ನು ಮತ್ತೆ ಏರಿಸಲು ಹಲವಾರು ವರ್ಷಗಳವರೆಗೆ ಪರಿಶಿಷ್ಟ ಪಂಗಡದವರು ಹೋರಾಟ ಮಾಡಬೇಕಾಗುತ್ತದೆ. ಕೂಡಲೇ ಸರ್ಕಾರ ಇದನ್ನು ಸರಿಪಡಿಸಬೇಕು. ಇಲ್ಲವಾದರೆ ಈ ಸಮುದಾಯದ ಜನರು ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಈ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಇದನ್ನು ಜನಾಂದೋಲನವಾಗಿಸಿ ಹೋರಾಟ ಮಾಡಲಿದ್ದೇವೆ. ಮಾದಿಗ, ಅಲೆಮಾರಿ ಮೊದಲಾದ ಸಮುದಾಯಗಳ ಮುಖಂಡರೊಂದಿಗೆ ಚರ್ಚೆ ಮಾಡಲಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿ ಇದ್ದಾಗ ಕನಿಷ್ಠ ಮೀಸಲಾತಿ ಹೆಚ್ಚಳ ಮಾಡಿತ್ತು. ಇದು ಕಳ್ಳ-ಪೊಲೀಸ್ ಆಟದಂತಾಗಿದೆ. ಒಳಮೀಸಲಾತಿಯನ್ನು ಜಾರಿ ಮಾಡುತ್ತೇನೆ, ನೀವೆಲ್ಲರೂ ಸನ್ಮಾನ ಮಾಡಬೇಕು ಎಂದು ಮೊದಲೇ ಯೋಜಿಸಲಾಗಿತ್ತು. ಅದರಂತೆ ಜಾರಿ ಮಾಡಿ ಪ್ರಚಾರ ಪಡೆದುಕೊಂಡಿದ್ದಾರೆ. ಎಸ್ಟಿ ಸಮುದಾಯದ ಸಚಿವರು ಇದರ ವಿರುದ್ಧ ಧ್ವನಿ ಎತ್ತಿ ರಾಜೀನಾಮೆ ನೀಡಬೇಕಿತ್ತು ಎಂದರು.
ಕಾಂಗ್ರೆಸ್ ಸರ್ಕಾರವೆಂದರೆ ಕಾಂಚಾಣದ ಸರ್ಕಾರ. ಬಿಡದಿ ಮತ್ತು ಕಂಚಗಾನಹಳ್ಳಿಯಲ್ಲಿ 9,600 ಎಕರೆ ಜಾಗವನ್ನು ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಪ್ರದೇಶದಲ್ಲಿ ತೆಂಗು, ಅಡಿಕೆ, ರೇಷ್ಮೆ ಬೆಳೆಯಲಾಗುತ್ತಿದೆ. ಖಾಸಗಿ ಸರ್ಕಾರಿ ಸೇರಿದಂತೆ ಸುಮಾರು 7 ಲಕ್ಷ ಫ್ಲ್ಯಾಟ್ಗಳು ಇನ್ನೂ ಖಾಲಿ ಇವೆ. ಈ ಪೈಕಿ 3,000 ಎಕರೆ ಸರ್ಕಾರಿ ಜಮೀನಾಗಿರುವುದರಿಂದ ಆ ಹಣವನ್ನು ಲೂಟಿ ಮಾಡಲು ಯೋಜನೆ ರೂಪಿಸಲಾಗಿದೆ. ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಯೋಜನೆ ಸ್ಥಗಿತಗೊಳಿಸಿದ್ದರು. ಈಗ ಅದನ್ನೇ ಜಾರಿ ಮಾಡಲಾಗಿದೆ. ಕೃಷಿ ಜಮೀನನ್ನು ವಸತಿಗೆ ಬಳಸಿದರೆ ಆಹಾರ ಕೊರತೆ ಉಂಟಾಗಲಿದೆ ಎಂದರು.
ಜಿಬಿಎಗೆ ಕಸ ಮಾಫಿಯಾದಿಂದ ವಾರ್ಷಿಕ 700 ಕೋಟಿ ರೂ. ಹೊರೆಯಾಗಲಿದೆ. ಟೆಂಡರ್ ಮೊತ್ತ ಏರಿಕೆಯಿಂದಾಗಿ ಜನರಿಗೆ ಹೊರೆಯಾಗಲಿದೆ. ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಮೊದಲು ಕಸ ತೆಗೆಯುವ ಗ್ಯಾರಂಟಿಯನ್ನು ನೀಡಿದರೆ ಸಾಕು ಎಂದು ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಯಾವುದೇ ನಿರ್ಬಂಧ ವಿಧಿಸದೆಯೇ ಖರ್ಚು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇಷ್ಟಕ್ಕೇ ಕಾಂಗ್ರೆಸ್ ನಾಯಕರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜವಹರಲಾಲ್ ನೆಹರೂ ಚಿನ್ನ ಕೊಡಿ ಎಂದು ಜನರಿಗೆ ಮನವಿ ಮಾಡಿದ್ದರು. ಪಿ.ಚಿದಂಬರಂ ಅವರು ಕೂಡ ಚಿನ್ನ ಖರೀದಿಸಬೇಡಿ ಎಂದು ಕೋರಿದ್ದರು. ಕಾಂಗ್ರೆಸ್ನಂತೆ ಚಿನ್ನ ತಂದುಕೊಡಿ ಎಂದು ಪ್ರಧಾನಿ ಮೋದಿ ಕೇಳಿಲ್ಲ. ಕೇಂದ್ರದ ಸಚಿವರು ಸೈಕಲ್ ಬಳಸುವ ಮೂಲಕ ಜನರಿಗೆ ಕರೆ ನೀಡಿದ್ದಾರೆ. ನಾನು ಕೂಡ ಬೆಂಗಾವಲು ವಾಹನದ ಬಳಕೆ ಕಡಿಮೆ ಮಾಡುತ್ತಿದ್ದೇನೆ. ಇಡೀ ಕುಟುಂಬದ ಸದಸ್ಯರು ಕೂಡ ಮಿತವ್ಯಯ ಮಾಡಲಿದ್ದೇವೆ. ಯುದ್ಧ ನಿಲ್ಲುವ ಲಕ್ಷಣ ಇಲ್ಲವಾದ್ದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು.
ಹಿಂದೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಅದೇ ರೀತಿ ಅಧಿಕಾರಿಗಳು ಈಗ ಬಸ್ಸಿನಲ್ಲಿ ಪ್ರಯಾಣಿಸಬಹುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕ್ರಮ ವಹಿಸಬೇಕು. ಯುದ್ಧದ ಸಮಯದಲ್ಲಿ ರಾಹುಲ್ ಗಾಂಧಿ ಮಾತು ಕೇಳಿಕೊಂಡು ರಾಜಕೀಯ ಮಾಡುವ ಚಿಲ್ಲರೆ ಬುದ್ಧಿಯನ್ನು ಬಿಡಬೇಕು. ತಮಿಳುನಾಡಿನಲ್ಲಿ ರಾಹುಲ್ ಗಾಂಧಿಯನ್ನು ವೇದಿಕೆಯಲ್ಲಿ ಯಾರೂ ಕೇರ್ ಮಾಡಿಲ್ಲ. ಇಂತಹ ಸ್ಥಿತಿಯಲ್ಲಿ ಅವರು ರಾಜಕೀಯ ಮಾಡಬಾರದು ಎಂದು ಹೇಳಿದರು.
ನೀಟ್ ಪರೀಕ್ಷೆಯ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಿ ತಕ್ಷಣದ ಕ್ರಮ ವಹಿಸಲಾಗಿದೆ. ಈ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸರಿಪಡಿಸಲಿದೆ. ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಎಷ್ಟು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ನೋಡಿ ಅದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿ ಎಂದು ತಿರುಗೇಟು ನೀಡಿದರು.
ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಮೇ 15 ರಂದು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಬಿಜೆಪಿಯಿಂದ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದು, ಅಭ್ಯರ್ಥಿ ಆಯ್ಕೆ, ಬೂತ್ ಸಮಿತಿ ಮೊದಲಾದವುಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಜಿಬಿಎನಲ್ಲಿ ಸುಮಾರು 4000 ಕೋಟಿ ರೂ. ಆದಾಯ ಬರುತ್ತದೆ. ಮುಂಬೈ, ದೆಹಲಿಯಲ್ಲಿ ಹೆಚ್ಚು ಆದಾಯ ಬಂದರೂ ಅಲ್ಲಿ ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪದೇ ಪದೆ ಪಾಲಿಕೆ ವಿಭಜನೆ ಬಗ್ಗೆ ತೀರ್ಮಾನ ಬದಲಾಯಿಸುತ್ತಿದೆ. ಹೀಗೆ ಮಾಡಿ ಚುನಾವಣೆ ಮುಂದೂಡುವುದು ಸರಿಯಲ್ಲ. ಆದಷ್ಟು ಬೇಗ ಚುನಾವಣೆ ಮಾಡಲಿ ಎಂದರು.


