Menu

ತಮಿಳುನಾಡು ಸಿಎಂ ವಿಶೇಷ ಕರ್ತವ್ಯಾಧಿಕಾರಿ ವೆಟ್ರಿವೇಲ್: ವ್ಯಾಪಕ ವಿರೋಧ ಬಳಿಕ ನೇಮಕಾತಿ ಹಿಂಪಡೆದ ಸರ್ಕಾರ

ತಮಿಳುನಾಡು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಜ್ಯೋತಿಷಿ ಹಾಗೂ ಟಿವಿಕೆ ವಕ್ತಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ನೇಮಕಾತಿಯನ್ನು ಹಿಂಪಡೆಯಲಾಗಿದೆ.

ವಿಧಾನಸಭೆಯ ವಿಶ್ವಾಸಮತದ ಸಂದರ್ಭದಲ್ಲಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ (ರಾಜಕೀಯ) ಹುದ್ದೆಗೆ ನೇಮಿಸಿದ್ದಕ್ಕೆ ಸರ್ಕಾರದ ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ಅವರ ನೇಮಕಾತಿ ಆದೇಶವನ್ನು ವಾಪಸ್‌ ಪಡದಿದೆ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವ್ಯಕ್ತಿಗೆ ಸರ್ಕಾರದ ಅಧಿಕೃತ ಹುದ್ದೆ ನೀಡಿರುವುದನ್ನು ಪ್ರಶ್ನಿಸಿ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. ವಿಸಿಕೆ, ಡಿಎಂಡಿಕೆ, ಎಡ ಪಕ್ಷಗಳು ವಿರೋಧಿಸಿದ್ದವು, ಸಾಮಾಜಿಕ ಜಾಲತಾಣಗಳಲ್ಲಿಯೂ ಸರ್ಕಾರದ ವಿರುದ್ಧ ಆಕ್ರೋಶ ಪೋಸ್ಟ್‌ ಆಗಿತ್ತು.

ವಿಧಾನಸಭೆಯಲ್ಲಿ ಮಾತನಾಡಿದ ವಿಸಿಕೆ ಶಾಸಕ ವನ್ನಿ ಅರಸು, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯಲ್ಲಿ ಮೂಢನಂಬಿಕೆ ಮೂಲಕ ಜನರನ್ನು ಶೋಷಿಸುವವರ ವಿರುದ್ಧ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್, ಅವರು ನಿಮ್ಮ ರಾಜಗುರು ಆಗಿದ್ದರೆ ಅದು ವೈಯಕ್ತಿಕ ವಿಷಯ. ಅವರಿಗೆ ಉನ್ನತ ಸರ್ಕಾರಿ ಹುದ್ದೆ ನೀಡುವುದು ಒಪ್ಪಲಾಗುವುದಿಲ್ಲ. ಅನೇಕ ಯುವಕರು ನಿಮಗೆ ಮತ ಹಾಕಿದ್ದಾರೆ. ಅವರಿಗೆ ನೀವು ಯಾವ ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು.

ತಿರುವಳ್ಳೂರು ಜಿಲ್ಲೆಯ ಕೀಳನೂರು ಗ್ರಾಮದ ವಕೀಲ ಆರ್ ರತಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಕ್ವೋ ವಾರಂಟೊ ಅರ್ಜಿ ಸಲ್ಲಿಸಿ, ಸಾರ್ವಜನಿಕ ಇಲಾಖೆ ಹೊರಡಿಸಿದ್ದ ಆದೇಶದ ಆಧಾರದ ಮೇಲೆ ರಿಕ್ಕಿ ರಾಧನ್ ಪಂಡಿತ್ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ (ರಾಜಕೀಯ) ಹುದ್ದೆ ವಹಿಸಿಕೊಳ್ಳುವ ಅಧಿಕಾರವನ್ನು ಪ್ರಶ್ನಿಸಿದ್ದರು.

ಸುಪ್ರೀಂ ಕೋರ್ಟ್ ಸರ್ಕಾರದ ಯಾವುದೇ ಸೇವಾ ನೇಮಕಾತಿ ಅಥವಾ ಸಾರ್ವಜನಿಕ ಹುದ್ದೆಯ ನೇಮಕಾತಿ ಸಂವಿಧಾನದ ವಿಧಿ 309 ಅಡಿ ರೂಪಿಸಲಾದ ನಿಯಮಾವಳಿಗಳ ಪ್ರಕಾರವೇ ನಡೆಯಬೇಕು, ಸಂವಿಧಾನಾತ್ಮಕ ವ್ಯವಸ್ಥೆ ಹೊರತಾಗಿ ಯಾವುದೇ ನೇಮಕಾತಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.

Related Posts

Leave a Reply

Your email address will not be published. Required fields are marked *