Menu

ಪ್ರೀತಿಸಿದವನ ಮದುವೆಯಾಗಲು ಕುಟುಂಬ ವಿರೋಧ: ಕುಂದಗೋಳದಲ್ಲಿ ಯುವತಿ ಆತ್ಮಹತ್ಯೆ

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರೀತಿಸಿದವನ ಮದುವೆಯಾಗಲು ಕುಟುಂಬಸ್ಥರು ವಿರೋಧಿಸಿದ್ದಕ್ಕೆ ನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶ್ವೇತಾ ಕೊಟೆನ್ನವರ್ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಹಲವು ವರ್ಷಗಳಿಂದ ಹುಬ್ಬಳ್ಳಿ ತಾಲೂಕಿನ ಕೆರೆಸೂರ ಗ್ರಾಮದ ನಾಗರಾಜ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿ, ನಾಗರಾಜ್‌ನನ್ನು ಮದುವೆಯಾಗುವುದಾಗಿ ಹೇಳಿದ್ದಳು. ಇದಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮಿಗಳು ಪರಾರಿ: ಯುವಕನ ಅಣ್ಣನಿಗೆ ಶಿಕ್ಷೆ
ಬೆಂಗಳೂರು ಬ್ಯಾಡರಹಳ್ಳಿಯಲ್ಲಿ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿಹೋದ ಸಿಟ್ಟಿಗೆ ಯುವತಿ ಮನೆಯವರು ಯುವಕನ ಅಣ್ಣನನ್ನು ಅಪಹರಿಸಿ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬ್ಯಾಡರಹಳ್ಳಿ ಶಿವಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ ಜೋಡಿ ಇತ್ತೀಚೆಗೆ ಮನೆ ಬಿಟ್ಟು ಪರಾರಿಯಾಗಿತ್ತು. ಆಕ್ರೋಶಗೊಂಡ ಯುವತಿಯ ತಂದೆ ಬಸವರಾಜ್ ಮತ್ತು ಸಂಬಂಧಿಕರು, ಶಿವಕುಮಾರ್‌ನ ಅಣ್ಣ ಕೊಟ್ರೇಶ್ ಅವರನ್ನು ಪೊಲೀಸ್‌ ಸ್ಟೇಷನ್‌ಗೆ ಹೋಗೋಣ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ಥಳಿಸಿದ್ದಾರೆ.

ಹಲ್ಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿದ ಆರೋಪಿಗಳು, ಕೊಟ್ರೇಶ್ ಕೈಯಲ್ಲಿ ಶಿವು, ನೀನು ಎಲ್ಲಿದ್ದರೂ ಹುಡುಗಿಯನ್ನು ತಂದು ಒಪ್ಪಿಸು ಎಂದು ಹೇಳಿಸಿ ರೆಕಾರ್ಡ್ ಮಾಡಿದ್ದಾರೆ. ಕೊಟ್ರೇಶ್ ತಮ್ಮನ ಬಳಿ ಅಂಗಲಾಚುವ ವೀಡಿಯೊವನ್ನು ಆರೋಪಿಗಳು ಸಂಬಂಧಿಕರಿಗೆ ಕಳಿಸಿ ಬೆದರಿಕೆ ಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *