ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಯರಗನಹಳ್ಳಿ ಬಳಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಕಾಶ್ ಗೌಡ (24) ಮತ್ತು ಯಶಸ್ (23) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.
ಸ್ನೇಹಿತರೊಂದಿಗೆ ಯರಗನಹಳ್ಳಿ ಕೆರೆಯಲ್ಲಿ ಈಜಲು ಹೋದಾಗ ಈ ದುರಂತ ನಡೆದಿದ್ದು, ಇಬ್ಬರೂ ಕೆರೆಯಲ್ಲಿ ಮುಳುಗಿ ಅಸು ನೀಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವಕರು ಆಳ ನೀರಿಗೆ ಇಳಿದಿರಬಹುದು ಎಂದು ಪ್ರಾಥಮಿಕ ತನಿಕೆಯಲ್ಲಿ ಅಂದಾಜಿಸಲಾಗಿದೆ. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಕೆರೆಯ ಸುತ್ತ ಎಚ್ಚರಿಕೆ ಫಲಕಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕೆಂದು ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಗೋಡೆ, ಕಬ್ಬಿಣದ ಗೇಟ್ ಕುಸಿದು ಮಗು ಸಾವು
ಕಾಂಪೌಂಡ್ ಗೋಡೆ ಮತ್ತು ಅದಕ್ಕೆ ಜೋಡಿಸಲಾದ ಕಬ್ಬಿಣದ ಗೇಟ್ ಕುಸಿದು ಬಿದ್ದು ಐದು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಚಿಕ್ಕಬಾಣಾವರದ ದ್ವಾರಕನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗೌಸಿಯಾ (5) ಮೃತಪಟ್ಟ ಮಗು. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ವಾರಕಾನಗರದಲ್ಲಿರುವ ಮನೆ ರವಿಶಂಕರ್ ಅವರಿಗೆ ಸೇರಿದ್ದಾಗಿದ್ದು, ಗೌಸಿಯಾ ಕುಟುಂಬ ಮೂರು ತಿಂಗಳ ಹಿಂದೆ ಬಾಡಿಗೆ ಮನೆಗೆ ಬಂದಿದ್ದರು. ತಂದೆ, ತಾಯಿ ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದರು.


