ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ರೂ. ಮೌಲ್ಯದ್ದು ಎನ್ನಲಾದ ಆಭರಣದಲ್ಲಿ 28 ಗ್ರಾಂ ಮಾತ್ರ ಚಿನ್ನವಿದ್ದು, ತಾಮ್ರದ ಲೇಪನ ಮಾಡಲಾಗಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ಆಭರಣಗಳ ಖಚಿತತೆ ಮತ್ತು ಮೌಲ್ಯದ ಬಗ್ಗೆ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಉದ್ಯಮಿಗೆ ನೋಟಿಸ್ ನೀಡಿದ್ದಾರೆ.
ಮೇ 8ರಂದು ಎಎಂಆರ್ ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿ ಸಮ್ಮುಖ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಇವುಗಳ ಮೌಲ್ಯ 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ ಈ ಬೃಹತ್ ದೇಣಿಗೆ ನೀಡಲಾಗಿದೆ ಎಂದು ಸುದ್ದಿ ಆಗಿತ್ತು.
ಉದ್ಯಮಿ ಮಹೇಶ ರೆಡ್ಡಿ ಮನವಿಯಂತೆ ಎರಡು ದಿನ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಸೇರಿಸುವ ಮೊದಲು ಜಿಲ್ಲಾಡಳಿತ ಪರಿಶೀಲನೆ ನಡೆಸಿದಾಗ ಇದರಲ್ಲಿ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ. ಇವು ಬಂಗಾರದ ಆಭರಣಗಳಲ್ಲ ತಾಮ್ರದ ಮೇಲೆ ಬಂಗಾರದ ಲೇಪನ ಮಾಡಲಾದ ಆಭರಣಗಳು ಎಂಬುದು ದೃಢಪಟ್ಟಿದೆ.
ಅಧಿಕೃತ ಬಿಲ್ ಅಥವಾ ದಾಖಲೆಗಳಿಲ್ಲದೆ ಇವುಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ಜಿಲ್ಲಾಡಳಿತ ನಿರಾಕರಿಸಿದೆ. ದಾನ ನೀಡಿರುವ ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣವನ್ನು ದೃಢೀಕರಿಸುವ ಅಧಿಕೃತ ಬಿಲ್ ನೀಡುವಂತೆ ಮಹೇಶ ರೆಡ್ಡಿಗೆ ಸೂಚಿಸಲಾಗಿದೆ.
ಉದ್ಯಮಿಯಿಂದ ಅಧಿಕೃತ ದಾಖಲೆಗಳು ಸಿಗದ ಕಾರಣ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಅಪಾರ ಪ್ರಮಾಣದ ಚಿನ್ನವನ್ನು ಈ ಹಿಂದೆ ಮಹೇಶ ರೆಡ್ಡಿ ದಾನ ಮಾಡಿದ್ದರು.


