ಸಚಿವ ಜಮೀರ್ ಅಹ್ಮದ್ ಅವರ ಮನೆಯಲ್ಲಿ ಚಿನ್ನ ಕಳವು ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಂಬಂಧಿಕರಂತೆ ನಟಿಸಿ ಮನೆಗೆ ಬರುತ್ತಿದ್ದ ವ್ಯಕ್ತಿಯೇ ಒಂದು ಕೋಟಿ ರೂ. ಮೌಲ್ಯದ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಎಂಬುದು ಪತ್ತೆಯಾಗಿದೆ.
ತಿಂಗಳ ಹಿಂದೆ ಸಚಿವ ಜಮೀರ್ ಅಹ್ಮದ್ ನಿವಾಸಕ್ಕೆ ಸಂಬಂಧಿಕ ಎಂದು ಹೋಗುತ್ತಿದ್ದ ಸೈಯದ್ ಅಮೀರ್ ತನ್ನ ಸ್ನೇಹಿತ ಅಮಿರ್ ಅಹ್ಮದ್ ಜೊತೆಗೂಡಿ ಕಳ್ಳತನ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಮನೆಯಲ್ಲಿದ್ದ ಒಂದು ಕೋಟಿ ೧೩ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಹೋಗಿದ್ದರು.
ಸೈಯದ್ ಅಮೀರ್ ಟ್ರಾವೆಲ್ಸ್ ವ್ಯಾಪಾರದಲ್ಲಿ ತುಂಬಾ ನಷ್ಟ ಅನುಭವಿಸುತ್ತಿದ್ದು, ಫೈನಾನ್ಸ್‌ನಿಂದ ಸಾಲ ಸಿಗದ ಕಾರಣ ಸಂಬಂಧಿಕರ ಮನೆಯಲ್ಲೇ ಕಳವು ಮಾಡುವ ಪರಿಸ್ಥಿತಿ ಉಂಟಾಗಿತ್ತು ಎಂದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಕಳವು ಬಳಿಕ ಸೈಯದ್ ಅಮೀರ್ ಮನೆಗೆ ಬರುವುದನ್ನು ನಿಲ್ಲಿಸಿದ್ದಾನೆ. ಕಾಲ್ ರಿಸೀವ್ ಮಾಡುತ್ತಿರಲಿಲ್ಲ. ಆತನ ಮೊಬೈಲ್ ಸ್ವಿಚ್ ಆಫ್ ಆಗುತ್ತಿದ್ದಂತೆ ಕುಟುಂಬದವರಿಗೆ ಅನುಮಾನ ಬಂದಿದೆ, ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಾಜಿನಗರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿವರ ನೀಡಿದ್ದಾರೆ. ಕದ್ದ ಚಿನ್ನ ಅಡವಿಟ್ಟು ಹಣ ಪಡೆದು ಅದನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ. ಪೊಲೀಸರು ಕಳವಾದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


