ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಯಾವುದೇ ಸ್ಪಷ್ಟನೆ ಬೇಕಾದರೆ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ರಾಯಚೂರು ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಮೇ 15ರ ಡೆಡ್‌ಲೈನ್ ವಿಚಾರ ಹೊಸದೇನಲ್ಲ. ಕಳೆದ ನವೆಂಬರ್‌ನಿಂದಲೇ ಈ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಪ್ರತಿಕ್ರಿಯೆ ನೀಡಿದ್ದೇನೆ. ಹೆಚ್ಚಿನ ಮಾಹಿತಿ ಪಡೆಯಲು ಹೈಕಮಾಂಡ್ ಹಾಗೂ ಸಿಎಂ ಅವರನ್ನು ಪ್ರಶ್ನಿಸಬೇಕು ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಯಾವಾಗ ತೀರ್ಮಾನ ಕೈಗೊಳ್ಳುತ್ತದೆಯೋ ಆಗ ಅಂತಹ ಪ್ರಶ್ನೆಗಳು ಉದ್ಭವಿಸುತ್ತವೆ. ಆ ಸಂದರ್ಭದಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಗೃಹ ಸಚಿವ ಜಿ. ಪರಮೇಶ್ವರ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿದರೆ ಸ್ವಾಗತಿಸುತ್ತೇವೆ ಎನ್ನುವ ಹೇಳಿಕೆ ಕುರಿತು ಮಾತನಾಡಿದ ಅವರು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಸ್ವಾಗತ ಮಾಡುವುದಾಗಿ ತಿಳಿಸಿದರು.
ಸರ್ಕಾರಕ್ಕೆ ಈಗಾಗಲೇ ಎರಡುವರೆ ವರ್ಷಗಳು ಪೂರ್ಣಗೊಂಡಿದ್ದು, ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ತೆರಳುವುದು ಸಹಜ. ಸಚಿವ ಸ್ಥಾನಾಕಾಂಕ್ಷಿಗಳು ಹೋಗುವುದರಲ್ಲಿ ತಪ್ಪಿಲ್ಲ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ಅವರ ಜನ್ಮದಿನದಂದು “ಗುಡ್ ನ್ಯೂಸ್” ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕ ಬಸವನಗೌಡ ದದ್ದಲ್ ಉಪಸ್ಥಿತರಿದ್ದರು.


