ಒಡಿಶಾದ ಗ್ರಾಮೀಣ ಪ್ರದೇಶವೊಂದರಲ್ಲಿ ಸಹೋದರನೊಬ್ಬ ತನ್ನ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ 19,300 ರೂಪಾಯಿ ಪಡೆಯುವುದಕ್ಕಾಗಿ ಹೂಳಲಾಗಿದ್ದ ಆಕೆಯ ಶವವನ್ನೇ ತೆಗೆದು ಬ್ಯಾಂಕ್‌ಗೆ ಹೊತ್ತೊಯ್ದ ಘಟನೆ ದೇಶಾ ದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಿತು ಮುಂಡ ಎಂಬವರ ಸೋದರಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಬದುಕಿರುವಾಗ ಆಕೆ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂ. ಇದೆ. ಸಾವಿನ ನಂತರ ಅದನ್ನು ಪಡೆದುಕೊಳ್ಳುವಂತೆ ಸಹೋದರನಿಗೆ ತಿಳಿಸಿದ್ದಳು. ಅದರಂತೆ ಸೋದರ ಬ್ಯಾಂಕ್‌ಗೆ ತೆರಳಿದ್ದಾನೆ.
ಬ್ಯಾಂಕ್ ಸಿಬ್ಬಂದಿ ಅವನ ಮನವಿಯನ್ನು ಸ್ವೀಕರಿಸಲಿಲ್ಲ. ಖಾತೆಯ ಮಾಲೀಕರು ಸ್ವತಃ ಬರಬೇಕು ಅಥವಾ ಮೃತಪಟ್ಟಿದ್ದರೆ ಮರಣ ಪ್ರಮಾಣ ಪತ್ರ ತಂದು ಕೊಡಬೇಕು ಎಂದು ಹೇಳಿದ್ದಾರೆ. ಆದರೆ ಈತನಿಗೆ ಮರಣ ಪ್ರಮಾಣ ಪತ್ರವನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸುವುದಕ್ಕೂ ಅವನ ಕೈನಲ್ಲಿ ಸಾಧ್ಯವಲ್ಲದ ಮಾತಾಗಿತ್ತು.
ಆಗ ಜಿತು ಸಹೋದರಿಯ ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು, ಪ್ಲಾಸ್ಟಿಕ್ ಚೀಲ ಹೊದಿಸಿ ಐದು ಕಿಲೋಮೀಟರ್ ದೂರದ ಬ್ಯಾಂಕ್‌ಗೆ ಹೊತ್ತು ತಂದಿದ್ದಾನೆ. ಈ ದೃಶ್ಯವನ್ನು ಕಂಡ ಕೆಲವರು ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್ ವ್ಯವಸ್ಥೆಯ ಅಮಾನವೀಯತೆಯನ್ನು ಟೀಕಿಸಿದ್ದರೆ, ಕೆಲವರು ಜಿತು ಮುಂಡನ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವನಿಗೆ ಸಹಾಯ ಮಾಡಬೇಕೆಂದು ಹೇಳಿಕೊಂಡಿದ್ದಾರೆ.
ವೀಟಿಯೊ ವೈರಲ್ ಆದ ನಂತರ ಬ್ಯಾಂಕ್ ನಿಯಮಗಳು ಮತ್ತು ಕ್ರಮಗಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ ಬಡತನದ ಕಹಿ ಸತ್ಯ ಜನರನ್ನು ಯೋಚನೆಗೆ ಹಚ್ಚಿದೆ. 19,300 ರೂಪಾಯಿಗಳಿಗಾಗಿ ಇಂತಹ ಕೃತ್ಯಕ್ಕೆ ವ್ಯಕ್ತಿ ಮುಂದಾಗಬೇಕಾದರೆ ಅವನ ಪರಿಸ್ಥಿತಿ ಎಷ್ಟೊಂದು ದುಸ್ತರವಿರಬಹುದು ಎಂಬುದು ಸ್ಪಷ್ಟವಾಗುತ್ತದೆ.


