Menu

ಕುಮಾರಸ್ವಾಮಿ ಅವರಲ್ಲಿ ಏನೋ ಸಮಸ್ಯೆಯಿದೆ ಅಂದಿದ್ದೇಕೆ ಡಿಕೆ ಶಿವಕುಮಾರ್‌

“ಕುಮಾರಸ್ವಾಮಿ ತಮ್ಮ ಅನುಭವದ ಲೆಕ್ಕಾಚಾರದ ಮೇಲೆ ಮಾತನಾಡಿರಬೇಕು. ಅವರಲ್ಲಿ ಏನೋ ಸಮಸ್ಯೆ ಇರಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.  ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಹೀಗೆ  ಪ್ರತಿಕ್ರಿಯೆ ನೀಡಿದರು.

ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸಚಿವ ಸುಧಾಕರ್ ಆರೋಗ್ಯದ ವಿಚಾರ ಮುಚ್ಚಿಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಯಾವ ಹೆಬ್ಬೆಟ್ಟು, ಏನು ಎಂದು ಗೊತ್ತಿದ್ದರೆ ಅವರೇ ಹೇಳಬೇಕು. ಅವರ ಕುಟುಂಬದವರಿಗೆ ಹೇಳಬೇಕು. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕೆ ಮಾತನಾಡುತ್ತಿದ್ದಾರೆ. ಇದರಿಂದ ಅವರ ಘನತೆಗೆ, ಹಿರಿತನಕ್ಕೆ ಗೌರವ ಬರುವುದಿಲ್ಲ” ಎಂದು ಹರಿಹಾಯ್ದರು.

ಅಧಿಕಾರಿಗಳು ಕೇವಲ ಸೂಟ್ ಬೂಟ್ ಧರಿಸಿದ ಜನರಿಗೆ ಆದ್ಯತೆ ನೀಡಬಾರದು. ಬೆವರು ಹರಿಸಿ, ಭೂಮಿಯನ್ನ ಉತ್ತು, ಬಿತ್ತು ಹಳ್ಳಿಗಳಲ್ಲಿ ಕೆಲಸ ಮಾಡುವ ಜನಸಾಮಾನ್ಯರ, ಕಾರ್ಮಿಕರ ಪರವಾಗಿರಬೇಕು‌. ಅವರ ಬದುಕಿನಲ್ಲಿ ಬದಲಾವಣೆ ತರಬೇಕು. ಕೇವಲ ಗೋಡೆ ಕಟ್ಟಬೇಡಿ. ಗುರಿ ತಲುಪಲು ಸೇತುವೆ ನಿರ್ಮಾಣ ಮಾಡಿ‌ದಾಗ ನಿಮ್ಮ ಸೇವೆಗೆ ಅರ್ಥ ಬರುತ್ತದೆ” ಎಂದು ಶಿವಕುಮಾರ್‌ ಹೇಳಿದರು.

ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ  ಮಾತನಾಡಿದರು. “ರಾಜಕಾರಣಿಗಳ ಕಾಲಾವಧಿ ಕೇವಲ ಐದು ವರ್ಷ. ನಾವು ಈ ಸ್ಥಾನಕ್ಕೆ ಬರಬೇಕು ಎಂದರೆ ಎಷ್ಟು ನೀರು ಕುಡಿದಿರುತ್ತೇವೆ, ಏನೇನು ಮಾಡಿರುತ್ತೇವೆ ಎನ್ನುವುದು ನಿಮಗೂ ಗೊತ್ತಿರುತ್ತದೆ. ನೀವು 25- 30 ವರ್ಷಕ್ಕೆ ಅಧಿಕಾರಿಗಳಾಗುತ್ತೀರಿ.  ಯಾರೇ ಬಂದರೂ ಜಾತಿ, ಪ್ರಭಾವ ಬಳಸಿಕೊಂಡು ಮುಂದುವರಿಯುವವರು ನೀವು. ರಾಜಕಾರಣ ನಮಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ.  ಕೆಲವೊಬ್ಬರು ದಡ್ಡರು ಇರಬಹುದು. ಹೇಗೆ ಪ್ರಭಾವ ಬಳಸಿಕೊಳ್ಳುವುದು ಎಂದು ಸುಮ್ಮನಿರಬಹುದು. ಆದರೂ ಅಧಿಕಾರಿಗಳು ಚಾಣಕ್ಯರಿದ್ದೀರಿ” ಎಂದರು.

“ಅಧಿಕಾರಿಗಳನ್ನು ಜನರು ದೇವರ ರೂಪದಲ್ಲಿ ನೋಡುತ್ತಾರೆ.  ದೇವರು ನೀಡಿದ ಅವಕಾಶವನ್ನು ಜನಪರವಾಗಿ ನೀವು ಉಪಯೋಗಿಸಬೇಕು. ನಾವೆಲ್ಲರೂ ಸಾವಿರಾರು ಹೇಳಬಹುದು, ಆದರೆ ಕೊನೆಯದಾಗಿ ಕೆಲಸ ಮಾಡುವುದು ನಿಮ್ಮ ಮನಃಸಾಕ್ಷಿ. ಕಲ್ಲು, ಮಣ್ಣುಗಳಿಂದ ಗೋಡೆಯನ್ನೂ ಕಟ್ಟಬಹುದು ಜೊತೆಗೆ ಸೇತುವೆಯನ್ನೂ ನಿರ್ಮಿಸಬಹುದು” ಎಂದರು.

“ನರು ನಿಮ್ಮ ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಹತ್ತಿರಬರಬೇಕು. ಧನಾತ್ಮಕವಾದ ನಡೆ ನಿಮ್ಮದಾಗಬೇಕು. ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಿ. ಸ್ವಜಾತಿ ಪ್ರೇಮದಿಂದ, ಪ್ರಭಾವಿ ವ್ಯಕ್ತಿ, ದುಡ್ಡು ನೀಡುವವನು, ಬೇಕಾದ ವ್ಯಕ್ತಿ ಎಂದು ನೀವು ಟಿಪ್ಪಣಿ ಬರೆಯುವಾಗ ಜನಸಾಮಾನ್ಯನಿಗೆ ಒಂದು ರೀತಿ, ಇವರಿಗೆ ಬೇರೆ ರೀತಿ ಬರೆದು ಅಲೆಸುವ ಕೆಲಸ ಮಾಡಿದರೆ ಕೇವಲ ದಿನ ಹಾಗೂ ಸಮಯ ವ್ಯರ್ಥವಾಗುತ್ತದೆ ಎಂದರು.

ಯಾವುದೇ ಸರ್ಕಾರ ಇರಬಹುದು ಅದಕ್ಕೆ ಒಳ್ಳೆ ಹೆಸರು ಬರುವುದು ಅಧಿಕಾರಿಗಳಿಂದ.  ನಾವು ಮಾಡಿದ ಶಾಸನಗಳನ್ನು ಕಾರ್ಯರೂಪಕ್ಕೆ ತರುವವರು ನೀವು, ಅದು ತಪ್ಪು ಸರಿಯೋ ಎಂದು ವಿಶ್ಲೇಷಣೆ ಮಾಡುವುದು ನ್ಯಾಯಾಂಗ‌. ಎಲ್ಲರನ್ನ ಎಚ್ಚರಿಸುವುದು ಪತ್ರಿಕಾಂಗ. ಈಗ ಮಾಧ್ಯಮಗಳೇ ಎಲ್ಲಾ ತೀರ್ಪು ನೀಡುತ್ತಿವೆ. ಅವರಿಗೆ ಯಾವ ನ್ಯಾಯಾಧೀಶರೂ ಬೇಡ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *