ಒಳಮೀಸಲು ಗೊಂದಲದಿಂದ ನಾಡಿನ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿವೆ. ಈ ದಿಶೆಯಲ್ಲಿ ಸರ್ಕಾರವೀಗ ಒಳಮೀಸಲು ಸೂತ್ರಗಳನ್ನು ಅಳವಡಿಸಿ ನಿಯಮಾವಳಿ ರಚಿಸಬೇಕಿದ್ದು ಈ ಕೆಲಸವೂ ಈಗ ಸುಗಮವಾಗಿ ಮುಂದುವರಿಯುವುದು ಅನಿವಾರ್ಯ.
ಒಳಮೀಸಲು ಸಮಸ್ಯೆ ಬಗೆಹರಿದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಇದು ನಿಜಕ್ಕೂ ಬಗೆಹರಿದಸಮಸ್ಯೆಯೇ ಅಥವಾ ಸರ್ಕಾರದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ ಎಂಬುದು ಮುಖ್ಯ ಪ್ರಶ್ನೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲು ಮತ್ತು ಇದರ ಪರಾಮರ್ಶೆ ಎಂದರೆ ಯಾವುದೇ ಸರ್ಕಾರಕ್ಕೆ ಇದಷ್ಟು ಸುಲಭದ ಕೆಲಸವೇನಲ್ಲ. ಒಂದು ಕಡೆ ಮೀಸಲು ಪಾಲನೆ ವಿಚಾರದಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪುಗಳು ಮತ್ತು ಅದರ ಕಟ್ಟುನಿಟ್ಟಿನ ಪಾಲನೆ. ಇದರ ನಡುವೆ ಕೇಂದ್ರ ಸರ್ಕಾರದ ಕಾಲಕಾಲಿಕ ತೀರ್ಮಾನ. ಇವುಗಳೆಲ್ಲವೂ ಒಳಮೀಸಲು ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮಗಳು.
ರಾಜ್ಯದಲ್ಲಿ ಈ ಮೀಸಲು ಹಕ್ಕುಗಳಿಗಾಗಿ ದಲಿತರು ಮತ್ತು ಹಿಂದುಳಿದವರು ಕಳೆದ ಐದು ದಶಕಗಳಿಂದಲೂ ನಿರಂತರವಾದ ಹೋರಾಟವನ್ನು ಮುಂದುವರಿಸಿರುವುದು ಗಮನಾರ್ಹ. ದೇಶದ ಅತಿದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪರಿಶಿಷ್ಟ ವUದ ಜನತೆ ಇದ್ದರೂ, ಕರ್ನಾಟಕದಲ್ಲಿ ಇಲ್ಲಿಯವರೆಗೆ ಈ ದಿಶೆಯಲ್ಲಿ ನಡೆದಿರುವ ಸಾಮಾಜಿಕ ಅಧ್ಯಯನ ಮತ್ತು ಪರಿಶೀಲನೆ ಮತ್ತು ಪರಾಮರ್ಶೆ ಕಡಿಮೆಯಾದುದೇನಲ್ಲ. ಹೀಗಾಗಿ ಇಲ್ಲಿನ ದಲಿತ ಸಮುದಾಯದ ಸ್ಥಿತಿ ಗತಿ ಮತ್ತು ಸಾಮಾಜಿಕ ಬದುಕು ಕುರಿತು ನಡೆದಿರುವ ಸಮೀಕ್ಷೆ ಮತ್ತು ಸರ್ಕಾರದ ಬಳಿಯಿರುವ ತಜ್ಞರ ವರದಿ ಎಲ್ಲವೂ ಪರಿಗಣಿತವೇ. ಎಡಗೈ ಮತ್ತು ಬಲಗೈ ಎಂಬ ದಲಿತ ವರ್ಗದ ಮೀಸಲು ವಿಚಾರ ನಮ್ಮ ದೇಶದ ಸಂವಿಧಾನ ರಚನೆಯಾದ ಸಮಯದಲ್ಲಿ ದೇಶದ ಶಾಸನಕರ್ತರಿಗೆ ಕಾಡಿರಲಿಲ್ಲ ! ಇದೊಂದು ಹೊಸ ಸಮಸ್ಯೆ ಹೌದು. ಸಮಾಜವು ವಿಕಾಸ ಮತ್ತು ವಿಸ್ತಾರವಾದಂತೆ ಇದರ ನಡುವೆಯೇ ತಲೆದೋರುವ ಬಿಕ್ಕಟ್ಟು ಹೌದು.
ಎಸ್ ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಶೇ. ೧೮ ಮೀಸಲು ಅನ್ನು ಸಂವಿಧಾನವೇ ನೀಡಿದೆ ಎಂದಾಗ ಇದರ ಪ್ರಮಾಣವನ್ನು ಹೇಗೆ ಮತ್ತು ಎಷ್ಟು ಹೆಚ್ಚಿಸಬೇಕೆಂಬುದನ್ನು ಸರ್ಕಾರಗಳು ತೀರ್ಮಾನಿಸುವಂತಹದು. ಮೂರು ದಶಕಗಳ ಹಿಂದೆಯೇ ಈ ಸಮಸ್ಯೆ ರಾಜ್ಯವನ್ನು ಬಹುವಾಗಿ ಕಾಡಿದಾಗ. ಅಂದಿನ ಸರ್ಕಾರ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವ್ರರ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದು ಗಮನಾರ್ಹ. ಈ ವರದಿಯಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ಹಲವು ಮುಖಗಳಿವೆ ಮತ್ತು ಮೀಸಲು ಸಮಸ್ಯೆ ಬಗೆಹರಿಯಲು ಯಾವ ಬಗೆಯ ಸೂತ್ರಗಳನ್ನು ಅನುಸರಿಸಬೇಕೆಂಬ ಪರಿಹಾರಗಳೂ ಇವೆ. ಒಳಮೀಸಲು ಗೊಂದಲದಿಂದ ನಾಡಿನ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿವೆ. ಈ ದಿಶೆಯಲ್ಲಿ ಸರ್ಕಾರವೀಗ ಒಳಮೀಸಲು ಸೂತ್ರಗಳನ್ನು ಅಳವಡಿಸಿ ನಿಯಮಾವಳಿ ರಚಿಸಬೇಕಿದ್ದು ಈ ಕೆಲಸವೂ ಈಗ ಸುಗಮವಾಗಿ ಮುಂದುವರಿಯುವುದು ಅನಿವಾರ್ಯ.


