ಬೆಂಗಳೂರಿನಲ್ಲಿ ಹಣ ಡಬ್ಲಿಂಗ್ ಆಮಿಷವೊಡ್ಡಿ ಸಾರ್ವಜನಿಕರಿಗೆ 1800 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ನಡೆದಿದೆ. ‘ಕ್ರಿಸ್ಟಲ್ ಎಐ ರೋಬೋಟ್ ಟ್ರೇಡಿಂಗ್’ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ಹಣ ದ್ವಿಗುಣಗೊಳಿಸುವ ನಂಬಿಕೆ ಹುಟ್ಟಿಸಿ ವಂಚನೆ ಎಸಗಲಾಗಿದೆ.
ಈ ಸಂಬಂಧ ರಾಜೇಶ್ ಕಾಮತ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 2-3 ವರ್ಷಗಳಿಂದ ಸಕ್ರಿಯವಾಗಿದ್ದ ಈ ವಂಚಕ ಗ್ಯಾಂಗ್, ಬೆಂಗಳೂರಿನ ಕೆಂಗೇರಿ ರೈಲು ನಿಲ್ದಾಣದ ಬಳಿ ಸುಸಜ್ಜಿತ ಕಚೇರಿ ತೆರೆದಿತ್ತು. ಆರೋಪಿಗಳು “ಕೇವಲ 200 ದಿನಗಳಲ್ಲಿ ನಿಮ್ಮ ಹಣವನ್ನು ಡಬಲ್ ಮಾಡುತ್ತೇವೆ” ಎಂದು ನಂಬಿಸಿ ಸಾರ್ವಜನಿಕರಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ದುಬೈನಲ್ಲಿಯೂ ಕಚೇರಿ ಹೊಂದಿರುವುದಾಗಿ ಹೇಳಿಕೊಂಡು ಚೈನ್ ಲಿಂಕ್ ಮಾದರಿಯಲ್ಲಿ ಏಜೆಂಟ್‌ಗಳನ್ನು ನೇಮಿಸಿಕೊಂಡು ದೊಡ್ಡ ಮಟ್ಟಕ್ಕೆ ವಂಚನೆ ಜಾಲ ವಿಸ್ತರಿಸಿದ್ದರು.
ಹಗರಣದ ಪ್ರಮುಖ ಸೂತ್ರಧಾರಿಗಳಾದ ರಾಜೇಶ್ ಕಾಮತ್, ಮಧು, ನಾಗೇಶಪ್ಪ ಮತ್ತು ಪಳನಿ ಎಂಬವವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು, ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿಯೇ ಇವರು ಹೆಚ್ಚಿನ ಜನರಿಗೆ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಲಾಭದ ಆಸೆಗೆ ಬಿದ್ದು ಜೀವನದ ಉಳಿತಾಯವನ್ನು ಕಳೆದುಕೊಂಡವರು ಈಗ ದಿಕ್ಕು ತೋಚದಂತಾಗಿದ್ದಾರೆ. ಸಿಸಿಬಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಆನ್‌ಲೈನ್ ಟ್ರೇಡಿಂಗ್ ಮತ್ತು ರೋಬೋಟ್ ಟ್ರೇಡಿಂಗ್ ಹೆಸರಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.


