ಲೋಕಾಯುಕ್ತ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ಮಾಡುವ ಸಂಸ್ಥೆಯಲ್ಲ. ಒಂದುನೂರು, ಎರಡು ನೂರು ರೂಪಾಯಿ ಲಂಚ ತೆಗೆದುಕೊಳ್ಳುವ ಗುಮಾಸ್ತನನ್ನು ಸೆರೆ ಹಿಡಿದು ಶಿಕ್ಷಿಸುವ ಸಂಸ್ಥೆ ಮಾತ್ರವಲ್ಲ ಎಂಬುದನ್ನು ನ್ಯಾಯಮೂರ್ತಿ ಎನ್ . ವೆಂಕಟಾಚಲ ಮತ್ತು ನ್ಯಾಯಮೂರ್ತಿ. ಎನ್ ಸಂತೋಷ್ ಹೆಗ್ಡೆ ಮೊದಲ ಬಾರಿಗೆ ದೇಶಕ್ಕೆ ತೋರಿಸಿಕೊಟ್ಟ ರಾಜ್ಯದ ಇಬ್ಬರು ಪ್ರಮುಖ ಲೋಕಾಯುಕ್ತರು.
ಕರ್ನಾಟಕ ಲೋಕಾಯುಕ್ತ – ದೇಶದ ಇತಿಹಾಸದಲ್ಲಿ ವಿನೂತನ ಪುಟಗಳನ್ನು ಬರೆದ ರಾಜ್ಯ ಎಂದರೆ ಅತಿಶಯವಿಲ್ಲ. ಭ್ರಷ್ಟಾಚಾರ ನಿಗ್ರಹದ ಉದ್ದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿತಗೊಂಡ ಸ್ವಾಯತ್ತ ಸಂಸ್ಥೆ.
ಎಂಭತ್ರರ ದಶಕದ ಆದಿಯಲ್ಲಿ ಈ ಸಂಸ್ಥೆಯ ಸ್ಥಾಪನೆಗೆ ಮೊದಲ ಬೀಜಾಕ್ಷರ ಬಿತ್ತು. ಮುಖ್ಯಮಂತ್ರಿ ಆದಿಯಾಗಿ ಎಲ್ಲ ಪಬ್ಲಿಕ್ ಸರ್ವೆಂಟ್ಸ್ ಲೋಕಾಯುಕ್ತ ವ್ಯಾಪ್ತಿಗೆ ಒಳಪಡಬೇಕೆನ್ನುವ ಕಾಯಿದೆಗೆ ಒತ್ತು ನೀಡಿದವರು ರಾಜ್ಯದ ಹಿಂದಿನ ಮುಖ್ಯಮಂತ್ರಿಯೂ ಆಗಿದ್ದ ರಾಮಕೃಷ್ಣ ಹೆಗಡೆ . ತರುವಾಯ ಇದಕ್ಕೆ ರೂಪುರೇಷೆಗಳು ಬಂದಿದ್ದು ೧೯೮೪ರಲ್ಲಿ.
ಅದೇನೆ ಇರಲಿ. ಲೋಕಾಯುಕ್ತ ಎಂದರೆ ಕೇವಲ ತಾಲೂಕು ಕಚೇರಿಯಲ್ಲಿ ಒಂದು ನೂರು ಅಥವಾ ಐದುನೂರು ರೂಪಾಯಿ ಲಂಚ ಪಡೆದ ಗುಮಾಸ್ತನನ್ನು ಹಿಡಿಯಲು ಮತ್ತು ದಂಡಿಸಲು ರೂಪುಗೊಂಡ ಸಂಸ್ಥೆಯಲ್ಲ. ಇದು ಸರ್ಕಾರದ ಮಟ್ಟದಲ್ಲಿ ಜನತೆಯನ್ನು ಲಂಚಕ್ಕಾಗಿ ಕಿತ್ತು ತಿನ್ನುವ ರಚನೆಯಾದ ಸಂಸ್ಥೆ ಮಾತ್ರವಲ್ಲ ಎಂಬುದನ್ನು ಕರ್ನಾಟಕ ಲೋಕಾಯುಕ್ತ ಈಗಾಗಲೇ ಸಾಬೀತುಪಡಿಸಿದೆ.
ತೊಂಭತ್ತರ ದಶಕದ ಅಂತ್ಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದ ಎಂ.ಎಫ್ ಸಲ್ಡಾನಾ ಲೋಕಾಯುಕ್ತ ಉದ್ದೇಶ ಮತ್ತು ಕಾರ್ಯವೈಖರಿಯನ್ನು ಟೀಕಿಸಿ ತೀರ್ಪು ನೀಡಿದ್ದು ಗಮನಾರ್ಹ. ಭ್ರಷ್ಟ ತಿಮಿಂಗಲಗಳನ್ನು ಹಿಡಿಯಲು ಲೋಕಾಯುಕ್ತ ಏಕೆ ವಿಫಲವಾಗಿದೆ ಎಂಬುದು ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನ ಕಳಕಳಿ . ಆದರೆ ಮುಂದಿನ ದಿನಗಳಲ್ಲಿ ಅಂದರೆ ೨೦೦೧ ರಿಂದ ೨೦೦೬ ಮತ್ತು ೨೦೦೬ ರಿಂದ ೨೦೧೨ರ ಸಮಯದ ಹತ್ತು ವರ್ಷಗಳಲ್ಲಿ ರಾಜ್ಯ ಲೋಕಾಯುಕ್ತ ಇಡೀ ದೇಶವು ಗಮನಸೆಳೆಯುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಗಮನಾರ್ಹ.
ಲೋಕಾಯುಕ್ತ ಎಂದರೆ ಬರೀ, ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ಮಾಡುವ ಸಂಸ್ಥೆ ಅಲ್ಲ. ಅಲ್ಲದೆ ನೂರು, ಎರಡು ನೂರು ರೂಪಾಯಿ ಲಂಚ ತೆಗೆದುಕೊಳ್ಳುವವರನ್ನು ಹಿಡಿದು ಶಿಕ್ಷಿಸುವ ಸಂಸ್ಥೆ ಮಾತ್ರವಲ್ಲ ಎಂಬುದನ್ನು ನ್ಯಾಯಮೂರ್ತಿ ಎನ್ . ವೆಂಕಟಾಚಲ ಮತ್ತು ನ್ಯಾಯಮೂರ್ತಿ. ಎನ್ ಸಂತೋಷ್ ಹೆಗ್ಡೆ ಲೋಕಕ್ಕೆ ತೋರಿಸಿದವರು. ಸಣ್ಣ ಕೆಲಸಕ್ಕೂ ಸಾಮಾನ್ಯನನ್ನು ಲಂಚಕ್ಕಾಗಿ ಪೀಡಿಸಿದ ಸರ್ಕಾರಿ ನೌಕರರ ಪಾಲಿಗೆ ಸಿಂಹಸ್ವಪ್ನವಾದವರು ವೆಂಕಟಾಚಲ. ಜನಮಾನಸ ಎದುರಿಸಿದ ಇಂತಹ ಹಲವು ಹತ್ತು ಸಮಸ್ಯೆಗಳನ್ನು ನೇರವಾಗಿ ಜನತೆಯ ಬಳಿಗೇ ಹೋಗಿ ಅವುಗಳನ್ನು ಬಗೆಹರಿಸಿದ ರಾಜ್ಯದ ಮೊದಲ ಲೋಕಾಯುಕ್ತ. ಅರ್ಥಾತ್ ಭ್ರಷ್ಟಾಚಾರದ ಬೇರುಗಳನ್ನು ಸಮಾಜದಿಂದ ಹೇಗೆ ನಿರ್ಮೂಲನೆ ಮಾಡಬೇಕು ಮತ್ತು ಲೋಕಾಯುಕ್ತ ಅಂತಹ ಸಂಸ್ಥೆ ತನ್ನ ಪರಿದಿಯಲ್ಲಿ ಕಾರ್ಯ ನಿರ್ವಹಿಸಿದಾಗ ಈ ಕಾಯಿದೆಯ ಸದಾಶಯಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದನ್ನು ವೆಂಕಟಾಚಲ ತೋರಿಸಿಕೊಟ್ಟವರು. ಸಂತೋಷ್ ಹೆಗ್ಡೆ ಅವರ ಕಾರ್ಯಪಾಲನೆಯ ದಾರಿಯೂ ಇದೇ ಆಗಿತ್ತು . ಒಟ್ಟಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಎಂಬ ಮಹಾಯಜ್ಞಕ್ಕೆ ಅಕ್ಷರಶಃ ಜನತೆಯ ಕೊಂದುಕೊರತೆಗಳನ್ನು ಬಗೆಹರಿಸುವ ಮಹಾನ್ ಆಚಾರ್ಯರಾಗಿ ರಾಜ್ಯದ ಇಬ್ಬರು ಲೋಕಾಯುಕ್ತರು ಕಾರ್ಯ ನಿರ್ವಹಿಸಿದ್ದು ಗಮನಾರ್ಹ. ನಲವತ್ತು ವರ್ಷಗಳ ಇತಿಹಾಸವುಳ್ಳ ಲೋಕಾಯುಕ್ತ ತನ್ನ ಕಾರ್ಯ ನಿರ್ವಹಣೆಯಲ್ಲಿ ಮತ್ತಷ್ಡು ಉಜ್ವಲಗೊಳ್ಳಬೇಕೆಂಬುದು ನಾಡಿನ ಜನಾಶಯ.


