ದಕ್ಷಿಣದಲ್ಲಿ ಎಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆ ಆಗಬೇಕೆಂಬುದನ್ನು ಸುಪ್ರೀಂ ಕೋರ್ಟ್ ಆಡಳಿತದ ಪ್ರಧಾನ ಅಧಿಕಾರಿಯೂ ಆಗಿರುವ ಸಿಜೆಐ ಹಾಗೂ ಕೊಲಿಜಿಯಂ ವಿವೇಚನೆಗೆ ಬಿಟ್ಟ ವಿಚಾರ. ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈ ಮಹಾನಗರಗಳು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಯೋಗ್ಯ ಸ್ಥಳಗಳು.
ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆ ಇಂದಿನದಲ್ಲ. ಇದು ಬಹಳ ದಿನಗಳಿಂದಲೂ ಕೇಳಿ ಬಂದ ಕೂಗು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರದಂದು ದೇಶದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಸಮಕ್ಷಮದಲ್ಲಿ ಈ ಮನವಿಯನ್ನು ಸಿಜೆಐಗೆ ಸಲ್ಲಿಸಿರುವುದು ಗಮನಾರ್ಹ.
ದೇಶದ ರಾಜಧಾನಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠವಿದೆ. ಇದು ಸ್ವರಾಜ್ಯಪೂರ್ವದಲ್ಲಿ ಅಂದರೆ ಬ್ರಿಟಿಷ್ ಆಡಳಿತದಲ್ಲಿ ಕೋಲ್ಕತದಲ್ಲಿ ಇತ್ತು. ಯಾವಾಗ ದೇಶದ ರಾಜಧಾನಿಯಾಗಿ ದಿಲ್ಲಿಗೆ ರಾಜಮುದ್ರೆ ದೊರೆಯಿತೋ ಅದರ ಬೆನ್ನಹಿಂದೆಯೇ ದೇಶದ ಸವೋನ್ನತ ನ್ಯಾಯಪೀಠವಾದ ಸುಪ್ರೀಂಕೋರ್ಟ್ಗೂ ದಿಲ್ಲಿ ಮುಖ್ಯ ಬಿಂದುವಾಯಿತು.
ಆದರೆ ದಕ್ಷಿಣ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಈಗಲೂ ಬಲು ದೂರ ಮತ್ತು ವೆಚ್ಚಮಯ. ಹೈಕೋರ್ಟ್ಗಳಿಂದ ವಿಲೇವಾರಿಯಾಗುವ ಪ್ರಕರಣಗಳ ಸಂಖ್ಯೆ ಕೂಡಾ ಇಂದು ಅಧಿಕ ಪ್ರಮಾಣದಲ್ಲಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಕಕ್ಷಿದಾರರಿಗೆ ಮೇಲ್ಮನವಿ ಸಲ್ಲಿಸಲು ಕಾನೂನಾತ್ಮಕವಾಗಿ ಎಲ್ಲ ಬಗೆಯ ಅವಕಾಶವಿದ್ದರೂ ದಿಲ್ಲಿ ಬಲುದೂರವಾಗಿದ್ದು ಇದೊಂದು ತೊಡಕಾಗಿರುವುದು ನಿಜ. ಈ ದಿಶೆಯಲ್ಲಿ ಸಿದ್ದರಾಮಯ್ಯ ಓರ್ವ ಸಾಮಾನ್ಯ ಕಕ್ಷಿದಾರನ ಅಂತರಾಳ ಮತ್ತು ಅಳಲನ್ನು ಸಿಜೆಐ ಮುಂದೆ ತೋಡಿಕೊಂಡಿರುವುದು ಸಮಂಜಸವಾಗಿದೆ.
ಆಂಧ್ರ , ತೆಲಂಗಾಣ, ತಮಿಳುನಾಡು ಕರ್ನಾಟಕ ಕೇರಳ ಮತ್ತು ಪುದುಚೇರಿ ರಾಜ್ಯಗಳಿಂದಲೂ ಇಂದು ನೂರಾರು ಮೇಲ್ಮನವಿಗಳು ಸುಪ್ರೀಂಕೋರ್ಟಿಗೆ ದಾಖಲಾಗುತ್ತಿವೆ. ಕಾಲ ಬದಲಾದಂತೆ ದೇಶದ ನ್ಯಾಯದಾನ ವ್ಯವಸ್ಥೆಯಲ್ಲಿಯೂ ಕೆಲವೊಂದು ಬದಲಾವಣೆಗಳು ಬೇಕಿದೆ. ಇಂತಹ ಬದಲಾವಣೆ ಅನಿವಾರ್ಯ. ಜನತೆಯ ಅಗತ್ಯ ಮತ್ತು ಬೇಡಿಕೆಗಳಿಗೆ ಇಂದು ಸುಪ್ರೀಂಕೋರ್ಟ್ ಪ್ರಧಾನ ನ್ಯಾಯಮೂರ್ತಿಗಳೂ ಸ್ಪಂದಿಸಬೇಕಿದೆ. ಕಕ್ಷಿದಾರನ ಮನೆ ಬಾಗಿಲಿಗೆ ನ್ಯಾಯದಾನ ಎಂಬುದು ವೇಲ್ಫೇರ್ ರಾಜ್ಯದ ಒಂದು ಪರಿಕಲ್ಪನೆಯಾಗಬೇಕು. ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ದೇಶದ ಕಟ್ಟಕಡೆಯ ಪ್ರಜೆಗೂ ನ್ಯಾಯ ದೊರಕುವಂತಾಗಬೇಕು. ಈ ನ್ಯಾಯದಾನದ ಪ್ರಕ್ರಿಯೆಯಲ್ಲಿ ಸರ್ಕಾರ ಮತ್ತು ಉನ್ನತ ನ್ಯಾಯಾಂಗದ ಪಾತ್ರ ಅತಿಮುಖ್ಯ.
ದಕ್ಷಿಣದಲ್ಲಿ ಎಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆ ಆಗಬೇಕೆಂಬುದನ್ನು ಸುಪ್ರೀಂ ಕೋರ್ಟ್ ಆಡಳಿತದ ಪ್ರಧಾನ ಅಧಿಕಾರಿಯಾದ ಸಿಜೆಐ ಹಾಗೂ ಕೊಲಿಜಿಯಂ ನಿರ್ಧರಿಸುವಂತಹದು. ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈ ನಗರಗಳು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಯೋಗ್ಯ ಸ್ಥಳಗಳು. ಈ ನಾಲ್ಕೂ ನಗರಗಳಿಗೆ ಸುಪ್ರೀಂಕೋರ್ಟ್ ಬೆಂಚ್ ಸ್ಥಾಪನೆಗೆ ಬೇಕಿರುವ ಮೂಲಭೂತ ಸೌಕರ್ಯವನ್ನು ಒದಗಿಸುವ ಸಾಮರ್ಥ್ಯವಿರುವಂತಹ ಕೇಂದ್ರಗಳು ಎಂದರೆ ತಪ್ಪಲ್ಲ. ಪ್ರಕರಣಗಳ ವಿಲೇವಾರಿಗಿಂದು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಪ್ರಕರಣಗಳ ದಾಖಲಾತಿಗೆ ಅನುಗುಣವಾ ನ್ಯಾಯಾಲಯ ಕಟ್ಟಡ ಮತ್ತು ನ್ಯಾಯಾಧೀಶರ ನೇಮಕಾತಿಯೂ ಮುಖ್ಯ. ಈ ಮಾತು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೂ ಅನ್ವಯ. ಸಕಾಲದಲ್ಲಿ ನ್ಯಾಯದಾನ ಎಂಬ ಸಾಂವಿಧಾನಿಕ ಸಿದ್ಧಾಂತ ಜನತೆಗೆ ತಲುಪಬೇಕಾದರೆ ಸರ್ಕಾರ ಮತ್ತು ಉನ್ನತ ನ್ಯಾಯಾಂಗದ ನಡುವೆ ಆಡಳಿತಾತ್ಮಕ ಹೊಂದಾಣಿಕೆ ಮತ್ತು ಸಹಕಾರ ಅನಿವಾರ್ಯ.


