ಮಹಿಳಾ ಮೀಸಲು ಪ್ರಮಾಣ ಹೆಚ್ಚಿಸುವ ನೆಪದಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಚಾಣಕ್ಯ ತಂತ್ರವನ್ನು ಅನುಸರಿಸಿದೆ ಎಂಬ ಅಭಿಪ್ರಾಯವಿದೆ. ಅದೇನೆ ಇರಲಿ. ದಕ್ಷಿಣದಲಿ ಲೋಕಸಭೆ ಸೀಟುಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಇದು ನಿಚ್ಚಳವಾಗಿ ಚುನಾವಣೆಗಳಲ್ಲಿ ಬಿಜೆಪಿಗೆ ವರದಾನ ಆಗಲಿದೆ ಎಂಬುದನ್ನು ಸಂಪೂರ್ಣವಾಗಿ ಒಪ್ಪಲಾಗದು.
ಮಹಿಳಾ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ. ಇವೆರೆಡೂ ರಸ್ಪರ ಪೂರಕ. ರಾಜಕೀಯವಾಗಿ ಮಹಿಳೆಯರಿಗೆ ಶೇಕಡಾ ಐವತ್ತರಷ್ಟು ಮೀಸಲು ಒದಗಿಸುವ ಆಶಯ ಎಲ್ಲ ಪ್ರಮುಖ ಪಕ್ಷಗಳದ್ದು. ಗುರುವಾರದಿಂದ ದೇಶದ ಸಂಸತ್ತಿನಲ್ಲಿ ಇದರ ಸಾಧಕ – ಭಾದಕ ಕುರಿತ ಚರ್ಚೆ ಆರಂಭವಾದರೂ, ಇದರ ಸಂಪೂರ್ಣ ಲಾಭ ಪಡೆಯಲು ಯತ್ನಿಸಿರುವುವುದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ.
ಮಹಿಳಾ ಮೀಸಲು ಹೆಚ್ಚಳಕ್ಕೆ ಕಾಂಗ್ರೆಸ್ ಸೇರಿದಂತೆ ಯಾವ ಪ್ರಮುಖ ಪಕ್ಷದ ಪ್ರತಿರೋಧವಿಲ್ಲ. ಆದರೆ ಮೀಸಲು ನೆಪದಲ್ಲಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಗೆ ಮೋದಿ ಸರ್ಕಾರ ತೀವ್ರ ಆಸಕ್ತಿ ತೋರಿರುವುದು ಚರ್ಚೆಗೆ ಗ್ರಾಸವಾಗಿರುವಂತಹ ಸಂಗತಿ. ಇದರಿಂದ ನಿಜಕ್ಕೂ ರಾಜಕೀಯವಾಗಿ ಅತ್ಯಧಿಕ ಲಾಭವಾಗುವುದು ಆಡಳಿತಾರೂಢ ಬಿಜೆಪಿಗೆ ಎಂಬ ತರ್ಕ ವಿಶ್ಲೇಷಣೆ ಈಗ ದೇಶದ ಎಲ್ಲೆಡೆ ಮುಂದುವರಿದಿದೆ. ಆದರೆ ಇದರಲ್ಲಿ ಪೂರ್ಣ ಸತ್ಯ ಅಡಗಿಲ್ಲ. ೨೦೦೮ರಲ್ಲಿ ನ್ಯಾ ಕುಲದೀಪ್ಸಿಂಗ್ ಸಮಿತಿ ಕೈಗೊಂಡ ಕ್ಷೇತ್ರ ಮರುವಿಂಗಡಣೆ ಮತ್ತು ಸಮಿತಿಯ ಶಿಫಾರಸುಗಳಿಂದ ರಾಜಕೀಯವಾಗಿ ಅನುಕೂಲವಾಗಿದ್ದು ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ. ಆದರೆ ನ್ಯಾ. ಸಿಂಗ್ ಸಮಿತಿ ಆಗ ಒಟ್ಟು ಲೋಕಸಭೆ ಕ್ಷೇತ್ರಗಳನ್ನು ಹೆಚ್ಚಿಸಲು ಶಿಫಾರಸು ಮಾಡಿರಲಿಲ್ಲ . ಆದರೆ ಈಗ ಗಣನೀಯ ಪ್ರಮಾಣದಲ್ಲಿ ಸುಮಾರು ೨೫೦ಕ್ಕೂ ಅಧಿಕ ಸೀಟುಗಳ ಹೆಚ್ಚಳಕ್ಕೆ ಮೋದಿ ಸರ್ಕಾರ ಗುರಿ ಇಟ್ಟಿರುವುದು ಗಮನಾರ್ಹ.
ಹೌದು. ಈ ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿರುವ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಬದಲಾಗಲಿದೆ. ಹಾಗೆಯೇ ಕರ್ನಾಟಕದಲ್ಲಿಯೂ ಇದು ಬದಲಾವಣೆ ಕಾಣಲಿದೆ. ಮಹಿಳಾ ಮೀಸಲು ಹೆಚ್ಚಿಸುವ ನೆಪದಲ್ಲಿ ಮೋದಿ ಪಕ್ಷವು ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಮಹಾ ಚಾಣಕ್ಯ ತಂತ್ರವನ್ನು ಅನುಸರಿಸಿದೆ. ಆದರೆ ದಕ್ಷಿಣದಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಇದು ನಿಚ್ಚಳವಾಗಿ ಬಿಜೆಪಿಗೆ ಅನುಕೂಲವಾಗುವಂತಹದು ಎಂದು ಈಗಲೇ ನಿರ್ಣಯಿಸುವುದು ತಪ್ಪಾದೀತು.
ಮಹಿಳಾ ಮೀಸಲು ಹೆಚ್ಚಿಸುವ ವಿಧೇಯಕವನ್ನು ಮಂಡಿಸಿರುವ ಕೇಂದ್ರ ಸರ್ಕಾರ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ಮುಕ್ತ ಹಾಗೂ ಪಾರದರ್ಶಕತೆ ಹೊಂದಿಲ್ಲ ಎಂಬುದು ವಿಪಕ್ಷಗಳ ಆರೋಪ. ಕ್ಷೇತ್ರಗಳ ಮರುವಿಂಗಡಣೆ ಮತ್ತು ಹೆಚ್ಚಳವಿಲ್ಲದೆ ಪ್ರಜಾತಂತ್ರದಲ್ಲಿ ಮೀಸಲು ಇತರೆ ಸೌಲಭ್ಯಗಳನ್ನು ಈ ದೇಶದ ಜನತೆಗೆ ನೀಡಲು ಸರ್ಕಾರಗಳಿಗೆ ಸಾಧ್ಯವಿಲ್ಲ. ಆದರೆ ಇವೆಲ್ಲವೂ ದೇಶದ ಸಂಸತ್ತಿನ ಉಭಯ ಸದನಗಳಲ್ಲಿ ಇದು ಸುದೀರ್ಘ ಚರ್ಚೆಗೆ ಒಳಗಾಗಬೇಕಲ್ಲವೆ ? ಸಾಮಾಜಿಕ ನ್ಯಾಯವನ್ನು ಕಾಪಾಡುವ ದಿಶೆಯಲ್ಲಿ ಶೇಕಡಾ ಐವತ್ತು ಪ್ರಮಾಣ ಮೀರಿದ ಮೀಸಲು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ತೀರ್ಪು ನೀಡಿರುವುದೇನೋ ಸರಿ. ಆದರೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಈ ಬಗೆಯ ಕಟ್ಟುಪಾಡು ಯಾವುದೂ ಈಗ ಸರ್ಕಾರದ ಮುಂದೆ ಇಲ್ಲ. ಆದರೆ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಗೆ ನೇರ ಮತ್ತು ಪೂರಕ ಸಂಬಂಧವಿದೆ ಎಂಬುದನ್ನು ಈ ದೇಶದ ಜನತೆಗೆ ಸಮಗ್ರವಾಗಿ ವಿವರಿಸುವ ಗುರುತರ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು.


