ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಪ್ರಿಯಕರನೊಬ್ಬ ಯುವತಿಯ ಖಾಸಗಿ ಪೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದರಿಂದ ಯುವತಿಗೆ ನಿಗದಿಯಾಗಿದ್ದ ಮದುವೆ ಮುರಿದು ಬಿದ್ದಿದೆ. ಘಟನೆಯಿಂದ ಮನನೊಂದ ಯುವತಿ ಅವಮಾನವನ್ನು ಸಹಿಸಲಾಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಂದಾಳ ಗ್ರಾಮದ ಜಯಶ್ರೀ ಬಿರಾದಾರ್ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಏಪ್ರಿಲ್ 27 ರಂದು ಜಯಶ್ರೀಗೆ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಯುವತಿಯ ಪ್ರಿಯಕರ ಶ್ರೀಶೈಲ್ ಬಡಾನೂರ್ ಕೊಳ್ಳಿ ಇಟ್ಟಿದ್ದಾನೆ. ಜಯಶ್ರೀ ಮತ್ತು ತಾನು ಜೊತೆಗಿದ್ದ ಕೆಲವು ಖಾಸಗಿ ಪೋಟೋಗಳನ್ನು ಶ್ರೀಶೈಲ್ ಮದುವೆ ನಿಶ್ಚಯವಾಗಿದ್ದ ವರನ ಮನೆಯವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಯುವತಿ ಬೇರೊಬ್ಬನ ಜೊತೆಗಿರುವ ಪೋಟೋಗಳನ್ನು ಕಂಡ ವರನ ಕಡೆಯವರು ತಕ್ಷಣವೇ ಮದುವೆ ರದ್ದುಗೊಳಿಸಿದ್ದಾರೆ.
ಸಮಾಜದಲ್ಲಿ ಮಾನ ಮರ್ಯಾದೆ ಹೋಯಿತೆಂಬ ನೋವಿನಿಂದ ಜಯಶ್ರೀ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ನನ್ನ ಮಗಳ ಬಲಿ ಪಡೆದ ಶ್ರೀಶೈಲ್‌ನನ್ನು ಕೂಡಲೇ ಬಂಧಿಸಬೇಕು. ಆತನ ಕಿಡಿಗೇಡಿತನವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಯುವತಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


