ಭಾರತೀಯ ಜನತಾ ಪಾರ್ಟಿ ಮೂಲಕ ಹುಟ್ಟುವ ಮತ್ತು ಇಲ್ಲಿ ಉಗಮಿಸುವ ರಾಷ್ಟ್ರೀಯ ಆಲೋಚನೆ ಮತ್ತು ಸೂಚನೆಗಳೇ ಪರಮಶ್ರೇಷ್ಠ . ಬೇರೆಯವರು ನೀಡುವ ಸಲಹೆ ಮತ್ತು ಹೇಳುವ ಮಾತುಗಳು ವ್ಯರ್ಥ ಎಂಬ ಅಹಂಭಾವದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧೀರ ಮತ್ತು ಧೀಮಂತ ವ್ಯಕ್ತಿತ್ವಕ್ಕೆ ಹಿನ್ನಡೆಯಾಗುತ್ತಿದೆ ಎಂಬ ಬಲವಾದ ಆರೋಪಗಳಿವೆ. ಈಗಿನ ಪರಿಸ್ಥಿತಿಯನ್ನು ಕಂಡಾಗ ಈ ಆರೋಪಗಳನ್ನು ತಳ್ಳಿ ಹಾಕಲಾಗದು.
ಮಧ್ಯಪ್ರಾಚ್ಯದಲ್ಲಿ ಕಳೆದ ನಲವತ್ತು ದಿನಗಳಿಂದ ತಲೆದೋರಿರುವ ಯುದ್ಧ, ತಾರ್ಕಿಕ ಅಂತ್ಯವನ್ನು ಮುಟ್ಟಲಾಗಲಿಲ್ಲ. ಇರಾನ್ ಮೇಲೆ ಡೊನಾಲ್ಡ್ ಟ್ರಂಪ್ ಕ್ಷಣ ಕ್ಷಣಕ್ಕೂ ಹೇರುವ ಒತ್ತಡ ಮತ್ತು ಬಿಗಿಪಟ್ಟು. ಇದಕ್ಕೆ ಬಗ್ಗದ ಇರಾನ್ ! ಇದರ ನಡುವೆ ನಜ್ಜುಗುಜ್ಜಾದ ಕೊಲ್ಲಿ ದೇಶಗಳು. ಇದರ ನೇರ ಪರಿಣಾಮಕ್ಕೆ ತುತ್ತಾಗಿ ಕಂಗಾಲಾದ ಪ್ರಪಂಚದ ಇತರ ದೇಶಗಳು.
ಮೂರು ದೇಶಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಬಗೆಹರಿಸಲು ಈಗ ಸಮರ್ಥ ಮೂರನೆ ವ್ಯಕ್ತಿ ಇಲ್ಲದಿರುವುದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲಿ ಭಾರತವು ಮಧ್ಯಸ್ಥಿಕೆಯನ್ನು ವಹಿಸಿ ಶಾಂತಿ ಸಂಧಾನದ ಸೂತ್ರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಈ ವಿಚಾರದಲ್ಲಿ ಭಾರತವು ಸಂಪೂರ್ಣ ದೂರ ಸರಿದಿರುವುದನ್ನು ಕಂಡಾಗ ಹಲವು ಹತ್ತು ಅನುಮಾನ ತಲೆದೋರುವುದು ಖಂಡಿತ.
ಭಾgತದ ವಿದೇಶಾಂಗ ನೀತಿ ಈಗ ಟೀಕೆ ಮತ್ತು ಆರೋಪಗಳಿಗೆ ಗುರಿಯಾಗಿದೆ. ಕಳೆದ ಎಪ್ಪತ್ತು ವರ್ಷಗಳಿಂದಲೂ ಪಾಲಿಸಿಕೊಂಡ ಭಾರತದ ವಿದೇಶಾಂಗ ನೀತಿಗೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ತಿಲಾಂಜಲಿ ನೀಡಿದೆಯೇ ? ಹಾಗಾದರೆ ಈ ಸರ್ಕಾರದ ಹೊಸ ನೀತಿಯಾದರೂ ಏನು ಎಂಬುದು ದೇಶದ ಜನತೆಗೆ ತಿಳಿಯದ ಸಂಗತಿಯಾಗಿದೆ.
ಪಾಕಿಸ್ತಾನದಂತಹ ಉಗ್ರಗಾಮಿ ಸಂಘಟನೆಗಳನ್ನು ಪರೋಕ್ಷವಾಗಿ ಕುಮ್ಮಕ್ಕು ನೀಡುವ ದೇಶವೇ ಇಂದು ಯುದ್ಧ ಶಮನಗೊಳಿಸುವ ಕೆಲಸದಲ್ಲಿ ಆಸಕ್ತಿ ವಹಿಸಿದೆ. ಆದರೆ ವಿಶ್ವಗುರು ಎಂದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಭಾರತವೇಕೆ ಇರಾನ್ ಮತ್ತು ಅಮೆರಿಕ ನಡುವೆ ಸಂಧಾನ ನಡೆಸಲು ಮುಂದಾಗುತ್ತಿಲ್ಲ ? ಕೆಲವೊಂದು ವಿಚಾರಗಳಲ್ಲಿ ಮೋದಿ ಸರ್ಕಾರದ ನಿಲುವು ಮತ್ತು ನೀತಿ ಈ ದೇಶದ ಜನತೆಗೆ ಅರ್ಥವಾಗದ ಹಿಡನ್ ಅಜೆಂಡಾ ರೂಪದಲ್ಲಿರುವುದು ಗಮನಾರ್ಹ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಭಾರತದ ಸದೃಢ ಮತ್ತು ವಿಶ್ವಾಸದಾಯಕ ಮತ್ತು ಅಚಲ ವಿದೇಶಾಂಗ ನೀತಿ ಅನಿವಾರ್ಯ.
ಯಾರಿಗೂ ಬೇಡವಾಗಿರುವ ಈ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯ ಖಂಡಿತವಾಗಿಯೂ ಭಾರತಕ್ಕೆ ಇದೆ. ಕಳೆದ ಹತ್ತು ವರ್ಷಗಳಲ್ಲಿ ಈ ದೇಶದ ಪ್ರಧಾನಿ ಮೋದಿ ವಿದೇಶಗಳಿಗೆ ಕೈಗೊಂಡ ಪ್ರವಾಸದ ಮೂಲ ಆಶಯ ಮತ್ತು ಉದ್ದೇಶಗಳು ಇಂದಿನ ಬಿಕ್ಕಟ್ಟು ಶಮನಕ್ಕೆ ಒಂದು ಸಾಧನವಾಗಬೇಕಿತ್ತು. ದೇಶದಲ್ಲಿರುವ ಅನುಭವಿಗಳು ಮತ್ತು ಮೇಧಾವಿಗಳ ಸಲಹೆ ಮತ್ತು ಸೂತ್ರಗಳನ್ನು ಮೋದಿ ಅವರೇಕೆ ಪಡೆಯುತ್ತಿಲ್ಲ ಎಂಬುದೂ ಒಂದು ಪ್ರಶ್ನೆ. ಪ್ರತಿಪಕ್ಷಗಳು ಮತ್ತು ಚಿಂತಕರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ನಡೆಸುವುದು ತಪ್ಪೇನಲ್ಲವಲ್ಲ.
ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಮತ್ತು ಹಿರಿಮೆ ಹೆಚ್ಚಾಗಬೇಕಿದ್ದರೆ, ಮೋದಿ ಸರ್ಕಾರ ತನ್ನ ಸೀಮಿತ ಆಲೋಚನೆಗಳಿಂದ ತನ್ನನ್ನು ತಾನೇ ಕಟ್ಟಿ ಹಾಕಿಕೊಳ್ಳುವುದು ಸರಿಯಾದ ಮಾರ್ಗ ಅಲ್ಲ. ಭಾರತೀಯ ಜನತಾ ಪಾರ್ಟಿ ಮೂಲಕ ಹುಟ್ಟುವ ಮತ್ತು ಇಲ್ಲಿ ಉಗಮಿಸುವ ರಾಷ್ಟ್ರೀಯ ಆಲೋಚನೆ ಮತ್ತು ಸೂಚನೆಗಳೇ ಪರಮಶ್ರೇಷ್ಠ . ಬೇರೆಯವರು ನೀಡುವ ಸಲಹೆ ಮತ್ತು ಹೇಳುವ ಮಾತುಗಳು ವ್ಯರ್ಥ ಎಂಬ ಅಹಂಭಾವದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧೀರ ಮತ್ತು ಧೀಮಂತ ವ್ಯಕ್ತಿತ್ವಕ್ಕೆ ಹಿನ್ನಡೆಯಾಗುತ್ತಿದೆ ಎಂಬ ಬಲವಾದ ಆರೋಪಗಳಿವೆ. ಈಗಿನ ಪರಿಸ್ಥಿತಿಯನ್ನು ಕಂಡಾಗ ಈ ಆರೋಪಗಳನ್ನು ತಳ್ಳಿ ಹಾಕಲಾಗದು.


