ಭಾಷೆಗಳ ಕಲಿಕೆ ವಿಚಾರದಲ್ಲಿ ತೀರಾ ಮಡಿವಂತಿಕೆ, ಬಿಗಿಪಟ್ಟು ಏಕೆ ? ಅಂದಿನ ಕಾಮರಾಜ್, ರಾಜಾಜಿ, ರಾಮಚಂದ್ರನ್ ನಿಂದ ಹಿಡಿದು ಇಂದಿನ ಸ್ಟಾಲಿನ್,ಪಿಣರಾಯ್ ಮತ್ತು ಸಿದ್ದರಾಮಯ್ಯ ವರೆಗೆ ಹಿಂದೀ ಭಾಷೆಗೆ ವಿರೋಧ ವ್ಯಕ್ತವಾಗುತ್ತಲೆ ಇದೆ. ಇದರಿಂದ ಆಗುವ ಲಾಭವಾದರೂ ಏನು ?
ಹಿಂದೀ ಭಾಷಾ ಬಳಕೆ ಹಾಗೂ ದ್ರಾವಿಡ ರಾಜ್ಯಗಳ ನಡುವೆ ಮತ್ತೆ ವಿವಾದ ತಲೆದೋರಿದೆ. ಇದು ಹೊಸ ವಿವಾದವೇನೂ ಅಲ್ಲ. ಸ್ವರಾಜ್ಯಪೂರ್ವದಿಂದಲೂ ಈ ಕೂಗು ಇದೆ. ದಕ್ಷಿಣ ರಾಜ್ಯಗಳಲ್ಲಿ ಹಿಂದೀ ಬಳಕೆ ಕಡಿಮೆ. ಈ ಭಾಷೆಯ ಉತ್ತೇಜನದ ದೃಷ್ಟಿಯಿಂದಲೇ ಕೇಂದ್ರ ಸರ್ಕಾರ ಮೊದಲಿಂದಲೂ ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ. ಎಸ್‌ಎಸ್ ಎಲ್‌ಸಿ ಪಬ್ಲಿಕ್ ಪರೀಕ್ಷೆ ಹಿಂದಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಯದಲ್ಲಿ ಈ ಅಂಕಗಳನ್ನು ಬೇರೆ ವಿಷಯಗಳು ಉತ್ತೀರ್ಣಕ್ಕೆ ಪೂರಕ ರೀತಿಯಲ್ಲಿ ಬಳಸಿದ್ದೂ ಉಂಟು. ಆದರೆ ರ್‍ಯಾಂಕ್ ಘೋಷಿಸಲು ಮಾತ್ರ ಹಿಂದೀ ಭಾಷೆಯಲ್ಲಿ ಗಳಿಸಿದ ಅಂಕಗಳು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಇದು ಹಳೆಯ ಪರೀಕ್ಷಾ ಪದ್ದತಿಯ ಒಂದು ನಿಯಮ. ಹೆಚ್ಚೂ ಕಡಿಮೆ ಇದೇ ನೀತಿ ಇಂದು ರಾಜ್ಯ ಸರ್ಕಾರ ಅನುಸರಿಸಿದೆ. ಅದೇನೆ ಇರಲಿ. ಮಗುವಿನ ಕಲಿಕೆ ವಿಚಾರದಲ್ಲಿ ಹೇರಿಕೆ ಸಲ್ಲದು. ರಾಜ್ಯ ಸರ್ಕಾರ ರೂಪಿಸಿರುವ ಪಠ್ಯದಲ್ಲಿ ಹಿಂದೀ ಪರೀಕ್ಷೆಗೆ ಹೆಚ್ಚು ಮನ್ನಣೆ ಇಲ್ಲ. ಇಂದಿನ ಶಿಕ್ಷಣ ನೀತಿಯಾದರೂ ಏನು ? ಕೇಂದ್ರ ಮತ್ತು ರಾಜ್ಯಗಳ ಪ್ರತ್ಯೇಕ ನೀತಿ ಮತ್ತು ಠರಾವುಗಳ ಪರಿಣಾಮವಾಗಿ ಮಕ್ಕಳ ಕಲಿಕೆಯಲ್ಲಿ ಗೊಂದಲ ಮತ್ತು ತಳಮಳ ತಲೆದೋರಿರುವುದು ಕಟುವಾಸ್ತವ.
ಭಾಷೆಗಳ ಕಲಿಕೆ ವಿಚಾರದಲ್ಲಿ ತೀರಾ ಮಡಿವಂತಿಕೆ ಮತ್ತು ಬಿಗಿಪಟ್ಟು ಏಕೆ ? ಅಂದಿನ ಕಾಮರಾಜ್, ರಾಜಾಜಿ, ರಾಮಚಂದ್ರನ್ ನಿಂದ ಹಿಡಿದು ಇಂದಿನ ಸ್ಟಾಲಿನ್,ಪಿನರಾಯ್ ಮತ್ತು ಸಿದ್ದರಾಮಯ್ಯ ವರೆಗೆ ಹಿಂದೀ ಭಾಷೆಗೆ ವಿರೋಧವಿದೆ. ಆದರೆ ಇದರಿಂದ ಆಗುವ ಲಾಭವಾದರೂ ಏನು ?
ಹಿಂದಿ ಭಾಷೆಯನ್ನು ಸರಿಯಾಗಿ ಮಾತನಾಡಲು ಬಾರದ ವ್ಯಕ್ತಿ ಈ ದೇಶದ ಪ್ರಧಾನಿ ಆಗಲು ಅಸಮರ್ಥ ಎಂಬ ಪೂರ್ವಾಗ್ರಹ ಭಾವನೆ ಈಗಲೂ ಉತ್ತರ ಭಾರತದ ಜನತೆಯ ಮನದಲ್ಲಿ ಬಲವಾಗಿ ನೆಲೆಯೂರಿದೆ. ಅಲ್ಲದೆ ಉತ್ತರ ಭಾರತದಲ್ಲಿ ಈಗಲೂ ದಕ್ಷಿಣದ ವಾಸಿಗಳನ್ನು ಮದ್ರಾಸಿವಾಲ ಎಂದೇ ಕರೆಯುವುದುಂಟು . ಅಲ್ಲಿನ ಕೋರ್ಟು. ( ಹೈಕೋರ್ಟ್‌ಗಳೂ ಸೇರಿದಂತೆ) ಬ್ಯಾಂಕ್ ಮತ್ತು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ವ್ಯಾಪಕವಾಗಿ ಬಳಕೆ ಚಾಲ್ತಿಯಲ್ಲಿದೆ. ದಕ್ಷಿಣದಲ್ಲಿಯೂ ಇದನ್ನು ಕಡ್ಡಾಯವಾಗಿ ಹೇರಲು ಪರೋಕ್ಷ ಪ್ರಯತ್ನಗಳು ಮುಂದುವರಿದಿದೆ. ಇಂದಿನ ಬಹುತೇಕ ಕೇಂದ್ರ ಸರ್ಕಾರಿ ಆದೇಶಗಳು ಮತ್ತು ಠರಾವುಗಳು, ಶಾಸನಗಳು ಹಿಂದಿಯಲ್ಲಿದ್ದು ಇದು ಕೂಡಾ ದಕ್ಷಿಣದ ಜನತೆಗೆ ಉಕ್ಕಿನ ಕಡಲೆ ಆಗಿರವುದು ನಿಜ. ಆದರೆ ಭಾಷೆಗಳ ಕಲಿಕೆ ವಿಚಾರದಲ್ಲಿ ಸರ್ಕಾರಗಳು ಒತ್ತಡ ಹೇರುವುದು ಸರಿಯಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಇದು ಕಳೆದ ಎಪ್ಪತ್ತೈದು ವರ್ಷಗಳಿಂದಲೂ ಚರ್ಚೆಯಲ್ಲಿರುವ ವಿಷುಯ. ಪಿ. ವಿ. ನರಸಿಂಹರಾವ್, ರಾಮಕೃಷ್ಣ ಹೆಗಡೆ, ವಿರೇಂದ್ರ ಪಾಟೀಲ್, ಧರಂಸಿಂಗ್, ಅನಂತಕುಮಾರ್, ಮಲ್ಲಿಕಾರ್ಜುನ ಖರ್ಗೆ ಮೊದಲಾದ ಧುರೀಣರು ಮೂಲತಃ ದಕ್ಷಿಣದವರು. ಆದರೆ ಇವರೆಲ್ಲರ ಹಿಂದೀ ಭಾಷಾ ಪಾಂಡಿತ್ಯ ಮತ್ತು ನಿರರ್ಗಳ್ಳ ಭಾಷಾ ಪ್ರಯೋಗ ಪ್ರಶಂಸನೀಯ. ಮಗು ಕಲಿಯುವ ಭಾಷೆಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಸರ್ಕಾರಗಳು ಹುಟ್ಟು ಹಾಕಬೇಕೆ ವಿನಹ ದ್ವೇಷ ಮತ್ತು ತಾರತಮ್ಯಕ್ಕೆ ನೀರೆರೆಯುವುದು ಸಲ್ಲದು.


