ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮತ್ತೆ ಮನವಿ ಮಾಡಿರುವುದು ಸರಿಯಷ್ಟೆ. ಈ ಮನವಿಯನ್ನು ಕೇಂದ್ರ ಸಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇಂದು ಬೆಂಗಳೂರು, ಕೇವಲ ಕರ್ನಾಟಕದ ರಾಜಧಾನಿ ಮಾತ್ರವಲ್ಲ. ಭಾರತದ ಒಂದು ಪ್ರಮುಖ ಐಟಿ, ಬಿಟಿ ಮತ್ತು ವಾಣಿಜ್ಯ, ಶೈಕ್ಷಣಿಕ ಮತ್ತು ತಂತ್ರಜ್ಞಾನದ ಕೇಂದ್ರ. ಇಲ್ಲಿನ ಬೇಡಿಕೆ ಮತ್ತು ಬೇಕು, ಬೇಡಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿರುವುದು ಅನಿವಾರ್ಯ.
ಸಂಕಷ್ಟ ಕಾಲದಲ್ಲಿ ದೇಶವು ಒಗ್ಗಟ್ಟಾಗಿರುವುದು ಪ್ರತಿಯೊಬ್ಬರ ಕರ್ತವ್ಯ . ಒಕ್ಕೂಟ ಮಾದರಿಯ ಪ್ರಜಾತಂತ್ರ ಭಾರತದಲ್ಲಿ ಇದರ ಅಗತ್ಯತೆ ಹಾಗೂ ಅನಿವಾರ್ಯ ಸಾಕಷ್ಟಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹಕಾರ ಮತ್ತು ಸೌಹಾರ್ದತೆ ಅತಿ ಮುಖ್ಯ.
ಇಸ್ರೇಲ್- ಇರಾನ್ ನಡುವಣ ಯುದ್ಧ, ಸದ್ಯಕ್ಕೆ ಸ್ಥಗಿತೊಳ್ಳುವ ಲಕ್ಷಣಗಳಿಲ್ಲ. ಸಾವಿರಾರು ಹಡಗುಗಳು ಸಂಚಾರವಿಲ್ಲದೆ ಸ್ಥಗಿತಗೊಂಡಿರುವ ಹರ್ಮುಜ್ ಜಲಸಂಧಿ ಬಳಿ ತಲೆದೋರಿರುವಸಮರ ಉದ್ವಿಗ್ನತೆ ಈಗ ತುಸು ಶಮನಗೊಂಡಿದೆ. ಇರಾನ್ ದೇಶದ ತೈಲ ಹಡಗುಗಳ ಸಂಚಾರಕ್ಕೆ ಅಮೆರಿಕ ತಾತ್ಕಾಲಿಕವಾಗಿ ಒಪ್ಪಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭುಗಿಲೆದ್ದ ತೈಲ ಸಮಸ್ಯೆಗೆ ಸ್ಚಲ್ಪಮಟ್ಟಿಗೆ ಪರಿಹಾರ ದೊರೆತಿದೆ. ಭಾರತದ ರಾಜತಾಂತ್ರಿಕತೆಯ ಫಲವಾಗಿ ಇರಾನ್‌ನಿಂದ ಕಚ್ಚಾ ತೈಲ ಮತ್ತ ಎಲ್‌ಪಿಜಿ ಹೊಂದಿದ್ದ ಹಡಗುಗಳು ಹರ್ಮುಜ್ ಜಲಸಂಧಿಯಿಂದ ಭಾರತದತ್ತ ಹೊರಟಿದೆ. ಇವುಗಳಲ್ಲಿ ಕೆಲವು ಹಡಗುಗಳು ಮುಂಬೈ ಮತ್ತು ಮಂಗಳೂರು ಬಂದರು ತಲುಪಲು ಸಜ್ಜಾಗಿವೆ.
ವಿದೇಶದಿಂದ ಭಾರತಕ್ಕೆ ಈಗ ರವಾನೆಯಾಗಿರುವ ತೈಲ ಹಾಗೂ ಎಲ್‌ಪಿಜಿ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ಸಮಪ್ರಮಾಣದಲ್ಲಿ ವಿತರಣೆಯಾಗುವುದು ಲೇಸು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲುಗಳು ಮತ್ತು ವಾಣಿಜ್ಯ ಮಳಿಗೆಗಳು ಅಧಿಕ ಸಂಖ್ಯೆಯಲ್ಲಿವೆ. ಬೆಂಗಳೂರಿನಲ್ಲಿಂದು ಪ್ರಪಂಚದ ವಿವಿಧ ಮೂಲೆಗಳಿಂದ ಬಂದ ಚೀನಾ, ಬ್ರಿಟನ್ ಫ್ರಾನ್ಸ್, ಕೆನಡಾ, ನೈಜೀರಿಯಾ, ನೇಪಾಳ ಮೊದಲಾದ ದೇಶ ವಾಸಿಗಳು ನೆಲೆಸಿದ್ದಾರೆ. ಇಲ್ಲಿ ತರಹೆವಾರಿ ತಿಂಡಿ ತಿನಿಸು ಮತ್ತು ಆಹಾರ ಪದ್ದತಿ ಇದೆ. ಇವುಗಳನ್ನು ತಯಾರಿಸುವ ನೂರಾರು ಹೋಟೆಲುಗಳು ಇಂದು ನಗರದ ಮೂಲೆ, ಮೂಲೆಯಲ್ಲಿವೆ. ಇವುಗಳ ಕಾರ್ಯ ನಿರ್ವಹಣೆಗೆ ನಿತ್ಯ ಹತ್ತುಸಾವಿರ ಸಿಲಿಂಡರ್ ಪೂರೈಕೆಯಾಗಬೇಕಿದೆ. ಈ ದಿಶೆಯಲ್ಲಿ ರಾಜ್ಯಕ್ಕೆ ಅಗತ್ಯವಿರುವ ಅನಿಲ ಸಿಲಿಂಡರ್ ಪೂರೈಸುವಂತೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮತ್ತೆ ಮನವಿ ಮಾಡಿರುವುದು ಸರಿಯಷ್ಟೆ.
ಈ ಮನವಿಯನ್ನು ಕೇಂದ್ರ ಸಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇಂದು ಬೆಂಗಳೂರು, ಕೇವಲ ಕರ್ನಾಟಕದ ರಾಜಧಾನಿ ಮಾತ್ರವಲ್ಲ. ಭಾರತದ ಒಂದು ಪ್ರಮುಖ ಐಟಿ, ಬಿಟಿ ಮತ್ತು ವಾಣಿಜ್ಯ, ಶೈಕ್ಷಣಿಕ ಮತ್ತು ತಂತ್ರಜ್ಞಾನದ ಕೇಂದ್ರ. ಇಲ್ಲಿನ ಬೇಡಿಕೆ ಮತ್ತು ಬೇಕು, ಬೇಡಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿರುವುದು ಅನಿವಾರ್ಯ.
ರಾಜಕೀಯ ಪಾರ್ಟಿಗಳನ್ನು ಆಧರಿಸಿ ಬಿಜೆಪಿಯೇತರ ರಾಜ್ಯಗಳಿಗೆ ಕೇಂದ್ರವು ಈ ದಿಶೆಯಲ್ಲಿ ತಾರತಮ್ಯ ಧೋರಣೆ ಅನುಸರಿಸಿದರೆ, ಇದರಿಂದ ಕರ್ನಾಟಕಕ್ಕೆ ಪರಮ ಅನ್ಯಾಯವಾಗುವುದು ಖಂಡಿತ. ಮಂಗಳೂರು ಮತ್ತು ಮುಂಬಯಿಗೆ ಬಂದ ತೈಲ ಪ್ರಮಾಣದಲ್ಲಿ ಕರ್ನಾಟಕದ್ದೂ ಬಹುಬೇಡಿಕೆಯುಳ್ಳ ರಾಜ್ಯ ಎಂಬುದನ್ನು ಕೇಂದ್ರ ಸರ್ಕಾರವು ಮರೆಯುವಂತಿಲ್ಲ. ಕಾಳಸಂತೆಕೋರರೂ ಈಗ ಇದೇ ಸಮಯವೆಂದು ತಮ್ಮ ಕೈಚಳಕ ತೋರುತ್ತಿದ್ದಾರೆ. ಇದರ ಮೇಲೆ ಸರ್ಕಾರಗಳು ನಿಗಾಯಿಡಬೇಕಿದೆ ಮತ್ತು ಇಂತಹ ವಹಿವಾಟನ್ನು ಹತೋಟಿಗೆ ತರಬೇಕಿದೆ. ಒಟ್ಟಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಕೇಂದ್ರವು ಈ ವಿಚಾರದಲ್ಲಿ ನ್ಯಾಯಸಮ್ಮತ ನಿಲುವು ತಾಳಬೇಕಿದೆ.


